ಮಂಗಳೂರು: "ರಾಮೋಜಿ ರಾವ್ ಅವರು ದೂರದೃಷ್ಟಿತ್ವವುಳ್ಳವರು. ಉಪ್ಪಿನಕಾಯಿ ಮೂಲಕ ಒಂದು ಬೃಹತ್ ಉದ್ಯಮ ಆರಂಭಿಸಬಹುದು ಎಂದು ಬಹಳಷ್ಟು ವರ್ಷಗಳ ಹಿಂದೆಯೇ ಆಲೋಚನೆ ಮಾಡಿದವರು" ಎಂದು ವಿಜಯಕರ್ನಾಟಕ ದಿನಪತ್ರಿಕೆಯ ನಿವೃತ್ತ ಸ್ಥಾನೀಯ ಸಂಪಾದಕ, ಹಿರಿಯ ಪತ್ರಕರ್ತ ಕುಮಾರನಾಥ್ ಹೇಳಿದರು.
ನಗರದ ಎ.ಬಿ. ಶೆಟ್ಟಿ ವೃತ್ತದ ಬಳಿಯಿರುವ ಮಾರ್ಗದರ್ಶಿ ಚಿಟ್ಸ್ ಪ್ರೈ. ಲಿಮಿಟೆಡ್ ಕಚೇರಿಯಲ್ಲಿ ನಡೆದ ರಾಮೋಜಿ ರಾವ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ರಾಮೋಜಿ ರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, "ಈನಾಡು ಪತ್ರಿಕೆಯನ್ನು ರಾಮೋಜಿ ಅವರು ಆರಂಭಿಸಿದರು. ಈನಾಡು ಪತ್ರಿಕೆ ಆಂಧ್ರಪ್ರದೇಶದ ಮೇಲ್ಮನೆಯನ್ನೇ ರದ್ದುಮಾಡುವ ಮಟ್ಟಿಗೆ ಸುದ್ದಿ ಮಾಡಿ ಗಮನಸೆಳೆದಿತ್ತು. ಆ ಬಳಿಕ ರಾಮೋಜಿ ರಾವ್ 13 ಪ್ರಾದೇಶಿಕ ಚ್ಯಾನಲ್ಗಳನ್ನು ಕಟ್ಟಿದರು. ಅವರು ಆರಂಭಿಸಿದ ಮಾರ್ಗದರ್ಶಿ ಚಿಟ್ಸ್ ಫಂಡ್ 60 ವರ್ಷಗಳ ಬಳಿಕವೂ ಇದೆಯೆಂದರೆ ನಂಬಿಕೆ ವಿಶ್ವಾಸಾರ್ಹತೆಯೇ ಕಾರಣ" ಎಂದು ಬಣ್ಣಿಸಿದರು.
ಬಳಿಕ ಚಿತ್ರನಟ ಮೈಮ್ ರಾಮದಾಸ್ ಮಾತನಾಡಿ, "ರಾಮೋಜಿ ರಾವ್ ಅವರು ನಮ್ಮ ಅನ್ನದಾತರು. ನಮ್ಮ ಭವಿಷ್ಯ ರೂಪಿಸಿದವರು. ಅವರು ಬದುಕಿದ್ದಾಗಲೇ ದಂತಕತೆಯಾದವರು. ಬಹಳ ಹಿಂದೆಯೇ ಅವರು ರಾಮೋಜಿ ಫಿಲ್ಮ್ ಸಿಟಿ ಎಂಬ ಬೃಹತ್ ವಿಸ್ಮಯವೊಂದನ್ನು ಕಟ್ಟುವ ಧೈರ್ಯ ಮಾಡಿದವರು. ಕನ್ನಡ ಚಾನಲ್ ಬಗ್ಗೆ ನಿರೀಕ್ಷೆಯಿತ್ತು. ಅಂದು ಈಟಿವಿಯಲ್ಲಿ 120 ಮಂದಿಯ ಡೆಸ್ಕ್ನಲ್ಲಿ 40 ಮಂದಿ ಕರಾವಳಿಯವರಿದ್ದರು. ಯಾರೆಲ್ಲಾ ಅಂದು ಈಟಿವಿ ಕನ್ನಡದಲ್ಲಿ ದುಡಿದವರು ಈಗ ಎಲ್ಲರಿಗೂ ಮಾರ್ಗದರ್ಶಿಗಳಾದವರು. ಇಲ್ಲಿ ಕೆಲಸ ಮಾಡಿದವರು ಪ್ರಬುದ್ಧರು ಎಂಬ ಭಾವನೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.