ಚಿಕ್ಕೋಡಿ (ಬೆಳಗಾವಿ) :ನಾನು ಕಳೆದ 42 ವರ್ಷಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಒಡನಾಟ ಇಟ್ಟುಕೊಂಡು 10 ವರ್ಷಗಳ ಕಾಲ ನಿರ್ದೇಶಕನಾಗಿ, ಐದು ವರ್ಷ ಉಪಾಧ್ಯಕ್ಷನಾಗಿ, 27 ವರ್ಷ ಅಧ್ಯಕ್ಷನಾಗಿ ಕಾರ್ಯವನ್ನು ನಿರ್ವಹಿಸಿದ್ದೇನೆ. ಆದರೆ, ಇಂಥ ಪರಿಸ್ಥಿತಿ ನನಗೆ ಎಂದೂ ಬಂದಿರಲಿಲ್ಲ. ಇದರಿಂದ ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಅವರು ಹೇಳಿದ್ದಾರೆ.
ಅವರು ಶುಕ್ರವಾರ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ರಾಜೀನಾಮೆ ನೀಡಿದ ಬಳಿಕ ಶನಿವಾರ ಅವರ ಸ್ವಗೃಹವಾದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಾಧ್ಯಮಗೋಷ್ಟಿ ಕರೆದು ಮಾತನಾಡಿದರು. 42 ವರ್ಷಗಳಿಂದ ಡಿಸಿಸಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದೇನೆ. ನನಗೆ 60 ವರ್ಷ ಪೂರ್ಣವಾಗಿದೆ. ಹೀಗಾಗಿ ನಾನು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ. ಹೊರಗಡೆ ರಾಜಕಾರಣದಲ್ಲಿ ಬಣ ಇರಬಹುದು. ಆದರೆ, ಡಿಸಿಸಿ ಬ್ಯಾಂಕಿನ ವಿಚಾರಕ್ಕೆ ಬಂದರೆ ಯಾವುದು ಇಲ್ಲಿ ಬಣ ರಾಜಕೀಯ ಇಲ್ಲ. ಆದರೆ, ಇತ್ತೀಚಿಗೆ ಕೆಲವು ನಿರ್ಣಯ ತೆಗೆದುಕೊಳ್ಳುವುದಕ್ಕೆ ನನಗೆ ಒಂದು ಅಂತಿಮ ಹಂತಕ್ಕೆ ಬರೋದಕ್ಕೆ ಆಗಲಿಲ್ಲ. ಕೆಲವರು ಹೊಸ ಸದಸ್ಯತ್ವ ಶಿಫಾರಸು ನೀಡಿದರೆ, ಇನ್ನೂ ಕೆಲವರು ಬೇಡ ಅಂತಿದ್ರು. ಇದರಿಂದ ನೋವಾಗಿ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
ಎಲ್ಲ ನಿರ್ದೇಶಕರು ಒಗ್ಗಟ್ಟಾಗಿ ಇದ್ದೇವೆ. ಎಲ್ಲರ ಜೊತೆ ಮಾತನಾಡಿಯೇ ರಾಜೀನಾಮೆ ನೀಡಿದ್ದೇನೆ. ಅವಿಶ್ವಾಸ ನಿರ್ಣಯ ಮಾಡುವ ಚರ್ಚೆ ಆಗಿಲ್ಲ. ಯಾವ ನಿರ್ದೇಶಕರು ನನ್ನ ವಿರುದ್ಧ ಕೆಲಸ ಮಾಡಿಲ್ಲ. ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದ್ದಾರೆ. ಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದೇನೆ ಎಂದು ರಮೇಶ್ ಕತ್ತಿ ಸ್ಪಷ್ಟಪಡಿಸಿದರು.