ಬೆಂಗಳೂರು:ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಮುಸ್ಲಿಮರು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಕಳೆದೊಂದು ತಿಂಗಳಿಂದ ಶ್ರದ್ಧಾಭಕ್ತಿಯಿಂದ ಉಪವಾಸ ವ್ರತಾಚರಣೆ ಮಾಡಿರುವ ಧರ್ಮೀಯರು, ಗುರುವಾರ ಬೆಳಗ್ಗೆ ಎಲ್ಲ ಮಸೀದಿಗಳಲ್ಲಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಏಕಕಾಲಕ್ಕೆ ಸಾವಿರಾರು ಮಂದಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಡ ಜನರಿಗೆ ತಮ್ಮಿಂದಾದ ದಾನ ಮಾಡಿ ಶುಭಾಶಯ ಹಂಚಿಕೊಂಡರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಾಮಾಜಿಕ ಜಾಲಾತಾಣಗಳ ಮೂಲಕ ಹಬ್ಬದ ಶುಭಾಶಯ ಕೋರಿದ್ದಾರೆ.
ರಸ್ತೆ ಸಂಚಾರದಲ್ಲಿ ವ್ಯತ್ಯಯ:ರಂಜಾನ್ ಪ್ರಾರ್ಥನೆಯ ಸಲುವಾಗಿ ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಚಾಮರಾಜಪೇಟೆಯ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಕಂಡುಬಂತು.
ವಿಜಯಪುರ ವರದಿ:ವಿಜಯಪುರ ಜಿಲ್ಲೆಯಾದ್ಯಂತ ರಂಜಾನ್ ಹಬ್ಬದ ಸಡಗರ ಕಳೆಗಟ್ಟಿತ್ತು. ನಗರ ಸೇರಿದಂತೆ ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಇತರೆ ಮುಖಂಡರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.
ಬೆಳಗಾವಿ ವರದಿ:ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈದ್-ಉಲ್-ಫಿತ್ರ್ ಹಬ್ಬಾಚರಣೆ ನಡೆಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು.
ದಾವಣಗೆರೆ ವರದಿ: ದಾವಣಗೆರೆ ನಗರದ ಹಳೇ ಈದ್ಗಾ ಮೈದಾನ, ರಾಮನಗರದ ಈದ್ಗಾ ಮೈದಾನ, ಶಿವ ನಗರ ಬಳಿ ಇರುವ ಹೊಸ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳ್ಳಾರಿಯಲ್ಲೂ ಸಂಭ್ರಮದ ರಂಜಾನ್ ಹಬ್ಬಾಚರಿಸಲಾಯಿತು. ನಗರದ ಎಪಿಎಂಸಿ ಬಳಿಯ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ:ದೇಶಾದ್ಯಂತ ಇಂದು ಮುಸ್ಲಿಂ ಬಾಂಧವರಿಗೆ ಈದ್ - ಉಲ್ - ಫಿತರ್ ಹಬ್ಬದ ಸಂಭ್ರಮ; ಶುಭಾಶಯಗಳ ವಿನಿಮಯ - Eid al Fitr celebrating