ಬೆಂಗಳೂರು:ಒಬ್ಬೊಬ್ಬ ಪಕ್ಷೇತರರಿಗೆ ನೂರು ಕೋಟಿ, 150 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಾಣಿಗ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಫೆ.27 ರಾಜ್ಯಸಭೆ ಚುನಾವಣೆ ನಡೆಯಲಿದೆ. ಒಬ್ಬ ಅಭ್ಯರ್ಥಿ ಗೆಲುವಿಗೆ 44 ಮತ ಬೇಕು. ನಮ್ಮಲ್ಲಿ ಮೂವರು ಅಭ್ಯರ್ಥಿಗಳು ಗೆಲ್ಲಲು ಸಂಖ್ಯಾಬಲ ಇದೆ. ನಮ್ಮ ಮೂರೂ ಅಭ್ಯರ್ಥಿಗಳು ಅನಾಯಾಸವಾಗಿ ಗೆಲ್ಲಲು ನಂಬರ್ ಇದೆ. ಆದರೆ ವಿಪಕ್ಷಗಳು ಷಡ್ಯಂತ್ರ ರೂಪಿಸಿವೆ. ಕುಪೇಂದ್ರ ರೆಡ್ಡಿ ವಾಮ ಮಾರ್ಗದಿಂದ ಗೆಲ್ಲಲು ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಆಮಿಷ, ಬೆದರಿಕೆಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಪಕ್ಷೇತರ ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ನಾವು ದೂರು ನೀಡಿದ್ದೇವೆ. ವಾಮಮಾರ್ಗದಿಂದ ಗೆದ್ದು ಬರಲು ಷಡ್ಯಂತ್ರ ಮಾಡುತ್ತಿದ್ದಾರೆ. ಆಮಿಷದ ದಾಖಲೆಗಳನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದೇವೆ ಎಂದು ತಿಳಿಸಿದರು.
ಪಕ್ಷೇತರ ಅಭ್ಯರ್ಥಿಗಳನ್ನು ಸಂಪರ್ಕ ಮಾಡಿರುವವರಲ್ಲಿ ಮಾಜಿ ಶಾಸಕರು, ವೈದ್ಯರು, ಹೊಟೇಲ್ ಮಾಲೀಕ, ಮಾಜಿ ಸಚಿವರು ಇದ್ದಾರೆ. ಕರೆ ಮಾಡಿ ವೋಟ್ ಹಾಕಿ ಇಲ್ಲವಾದರೆ ಪರಿಸ್ಥಿತಿ ನೆಟ್ಟಗೆ ಇರಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಎಷ್ಟು ಗಂಟೆಗೆ ಕರೆ ಮಾಡಿದ್ದಾರೆ, ಏನು ಹೇಳಿದ್ದಾರೆ ಎಂಬ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಒಬ್ಬೊಬ್ಬರಿಗೆ ಒಂದೊಂದು ರೇಟ್ ಹೇಳಿದ್ದಾರೆ ಎಂದು ಆರೋಪಿಸಿದರು.
ಅಭ್ಯರ್ಥಿ ಪುತ್ರ, ಸಂಬಂಧಿಕರು, ಉದ್ಯಮಿಗಳು, ಮಾಜಿ ಶಾಸಕರು ಕರೆ ಮಾಡುತ್ತಿದ್ದಾರೆ. ಕುಪೇಂದ್ರ ರೆಡ್ಡಿ ಎಂಬ ಉದ್ಯಮಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕುದುರೆ ವ್ಯಾಪಾರ ಮಾಡಲು ಮುಂದಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಗಳೇ ನಮ್ಮಲ್ಲಿ ಈ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ನಮ್ಮಲ್ಲಿ ವಾಯ್ಸ್ ರೆಕಾರ್ಡ್ ಇದೆ ಎಂದು ತರೀಕೆರೆ ಶಾಸಕ ಶ್ರೀನಿವಾಸ್ ಇದೇ ವೇಳೆ ತಿಳಿಸಿದರು.