ಬೆಂಗಳೂರು: ರಾಜ್ಯಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೊದಲನೆಯ ದಿನವಾದ ಇಂದು ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ವಿಧಾನಸೌಧದಲ್ಲಿ ಇಂದು ಪಕ್ಷೇತರ ಅಭ್ಯರ್ಥಿಯಾಗಿ ಡಾ. ಕೆ.ಪದ್ಮರಾಜನ್ ಎಂಬುವವರು ನಾಮಪತ್ರ ಸಲ್ಲಿಸಿದರು.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕ ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಇಂದು ಅಧಿಸೂಚನೆ ಹೊರಬಿದ್ದಿದ್ದು, ಇಂದಿನಿಂದ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಬಹುದಾಗಿದೆ. ಫೆ.15 ನಾಮಪತ್ರಗಳ ಸಲ್ಲಿಕೆಗೆ ಕಡೆದಿನವಾಗಿದ್ದು, ಫೆ.16 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಫೆ.20 ರವರೆಗೂ ಕಾಲಾವಕಾಶವಿದೆ. ನಾಲ್ಕಕ್ಕಿಂತ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರೆ. ಫೆ.27 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಅಂದು ಸಂಜೆ 5 ಗಂಟೆ ನಂತರ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯಸಭಾ ಸ್ಥಾನದಿಂದ ಏಪ್ರಿಲ್ 2 ರಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸದಸ್ಯರಾದ ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್ ಹಾಗೂ ಸಯ್ಯದ್ ನಾಸಿರ್ ಹುಸೇನ್ ಅವರು ನಿವೃತ್ತಿಯಾಗಲಿದ್ದಾರೆ. ರಾಜೀವ್ ಚಂದ್ರಶೇಖರ್ ಬಿಜೆಪಿಯಿಂದ ಚುನಾಯಿತರಾಗಿದ್ದರೆ, ಉಳಿದ ಮೂವರು ಸದಸ್ಯರು ಕಾಂಗ್ರೆಸ್‍ನಿಂದ ಚುನಾಯಿತರಾಗಿದ್ದರು. ಇವರ ನಿವೃತ್ತಿಯಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.