ಬೆಳಗಾವಿ :ಪ್ರತಿ ಯುಗಾದಿ, ದೀಪಾವಳಿ ಹಬ್ಬಗಳಿಗೆ ಸೀರೆ, ಹೊಸ ಬಟ್ಟೆ ಖರೀದಿಸಿ ತೊಟ್ಟು ಸಂಭ್ರಮಿಸುತ್ತೀರಿ. ಈ ಬಾರಿ ಹಬ್ಬದ ಜೊತೆಗೆ ಒಂದು ಪುಸ್ತಕ ಕೊಂಡು, ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಮಹಿಳೆಯರಿಗೆ ರಾಜ್ಯಸಭಾ ಸದಸ್ಯೆ, ಲೇಖಕಿ ಸುಧಾಮೂರ್ತಿ ಕರೆ ನೀಡಿದರು.
ಬೆಳಗಾವಿ ನಗರದ ಸಪ್ನ ಬುಕ್‌ಹೌಸ್ ಸಭಾಂಗಣದಲ್ಲಿ ಇಂದು ಭಾನುವಾರ ಹಮ್ಮಿಕೊಂಡಿದ್ದ ಸುಧಾಮೂರ್ತಿ ಅವರೊಂದಿಗೆ "ಮನದ ಮಾತು" ಮುಕ್ತ ಮಾತುಕತೆ, ಸಂವಾದ ಮತ್ತು ಸಲ್ಲಾಪ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದರು. ಕನ್ನಡಿಗರು ಮತ್ತು ಮರಾಠಿ ಮಹಿಳೆಯರು ಪುಸ್ತಕ ಕೊಂಡುಕೊಳ್ಳಿ. ನನ್ನದೇ ಪುಸ್ತಕ ಖರೀದಿಸಿ ಅಂತಾ ನಾನು ಕೇಳಿಕೊಳ್ಳೋದಿಲ್ಲ. ಯಾವುದೇ ಪುಸ್ತಕ ಕೊಂಡು ಓದಲು ಮನಸ್ಸು ಮಾಡಿ ಎಂದು ಕಿವಿಮಾತು ಹೇಳಿದರು. ಮನೆಯಲ್ಲಿ ಬೆಲೆ ಬಾಳುವ ಚಿನ್ನಾಭರಣ, ಸೀರೆ ಸೇರಿ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿಟ್ಟರೆ ಕಳ್ಳರು ಬಂದು ದೋಚಿಕೊಂಡು ಹೋಗಬಹುದು. ಆದರೆ, ಪುಸ್ತಕಗಳು ಇದ್ದರೆ ಯಾರೂ ಕದ್ದೊಯ್ಯುವುದಿಲ್ಲ ಎಂದರು.
ಇಡೀ ಕರ್ನಾಟಕವೇ ನನಗೆ ಪ್ರೀತಿ. ಅದರಲ್ಲೂ ಉತ್ತರ ಕರ್ನಾಟಕದ ಮೇಲೆ ನನಗೆ ವಿಶೇಷ ಪ್ರೀತಿ. ಉತ್ತರಕರ್ನಾಟಕದ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ನನಗೆ ಈ ಪದವಿ, ಗೌರವ ಸಿಕ್ಕಿದ್ದು ನಿಮ್ಮೆಲ್ಲರ ಪ್ರೇಮದಿಂದ. ನನಗೆ ಸಾಹಿತಿ ಅಂತಾ ಕರೆಸಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ. ಶ್ರೀಮಂತ ಉದ್ಯಮಿ ನಾರಾಯಣಮೂರ್ತಿ ಪತ್ನಿ ಅಂತಾ ಕರೆಸಿಕೊಳ್ಳುವುದಕ್ಕಿಂತ ಲೇಖಕಿ ಎನಿಸಿಕೊಳ್ಳಲು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಪುಸ್ತಕ ಹೃದಯದಿಂದ ಹುಟ್ಟುತ್ತದೆ. ಬರವಣಿಗೆ ಸೃಜನಾತ್ಮಕ ಕಲೆ. ಹೃದಯದಲ್ಲಿ ಹುಟ್ಟುವ ಮೂಲ ಭಾವನೆ ಕನ್ನಡ. ಹಾಗಾಗಿ, ನಾನು ಮೊದಲು ಬರೆಯೋದು ಕನ್ನಡದಲ್ಲೆ. ಆಮೇಲೆ ಇಂಗ್ಲಿಷ್ನಲ್ಲಿ ನಾನೇ ಟ್ರಾನ್ಸ್ಲೇಟ್ ಮಾಡುತ್ತೇನೆ. ಕರಾಚಿ, ಲಂಡನ್, ದಕ್ಷಿಣ ಆಫ್ರಿಕಾ, ಅಮೆರಿಕಾದಲ್ಲೂ ನನ್ನ ಪುಸ್ತಕಗಳನ್ನು ನೋಡಿದ್ದೇನೆ. ನಾನು ಅದ್ಭುತ ಅಲ್ಲ. ನನ್ನ ಕನ್ನಡ ಭಾಷೆ ಅದ್ಭುತ ಎಂದು ಸುಧಾ ಮೂರ್ತಿ ಅಭಿಪ್ರಾಯಪಟ್ಟರು.