ಬೆಂಗಳೂರು:ರಾಜ್ಯದಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಬಿದ್ದ ಬಿರುಗಾಳಿ ಮಳೆಗೆ ವಿವಿಧ ಕಡೆಗಳಲ್ಲಿ ಕೃಷಿಗೆ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ.
ಯಲಹಂಕ ಮಳೆ ವರದಿ: ಯಲಹಂಕ ತಾಲೂಕು ಹನಿಯೂರು ಗ್ರಾಮದಲ್ಲಿ ಸುರಿದ ಮಳೆಗೆ ರೈತ ಶಾಂತಕುಮಾರ್ ಬೆಳೆದಿದ್ದ ಸುಮಾರು 300ಕ್ಕೂ ಅಧಿಕ ನುಗ್ಗೆ ಗಿಡಗಳು ನೆಲಕ್ಕುರುಳಿವೆ. ಒಂದು ಎಕರೆ 24 ಗುಂಟೆಯಲ್ಲಿ ನುಗ್ಗೆ ಬೆಳೆದಿದ್ದರು. ಕೊಯ್ಲು ಪ್ರಾರಂಭವಾಗಿ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಮಳೆಯಿಂದ ನುಗ್ಗೆ ಸೇರಿದಂತೆ ಪಪ್ಪಾಯಿ ಮರಗಳಲ್ಲಿನ ಮೊಗ್ಗುಗಳೂ ಕೂಡಾ ಉದುರಿವೆ.
ಮೈಸೂರು ಮಳೆ ವರದಿ: ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಬಾಳೆ ನೆಲಕಚ್ಚಿದೆ. ಅಂದಾಜು 10 ನಿಮಿಷಗಳ ಕಾಲ ಬೀಸಿದ ಗಾಳಿಗೆ ಬಸವರಾಜ್, ಶೇಖರಪ್ಪ, ಸ್ವಾಮಿ, ನೂರ್ ಅಹಮ್ಮದ್, ದಿಕ್ರೀಯಾ ಸಾಹೇಬ್ ಎಂಬ ರೈತರ ಜಮೀನುಗಳಲ್ಲಿ ಬೆಳೆದಿದ್ದ ಬಾಳೆ ಬೆಳೆ ಮುರಿದುಬಿದ್ದಿದೆ.
ಬಂಡೀಪುರ, ಬಿಆರ್ಟಿ ವರದಿ: ಬಿಸಿಲಿನಿಂದ ಬಸವಳಿದಿದ್ದ ಚಾಮರಾಜನಗರ ಜಿಲ್ಲೆಯ ಹಲವು ಅರಣ್ಯ ಪ್ರದೇಶಗಳೂ ವರುಣಾಗಮನ ಕಂಡಿವೆ. ಬಂಡೀಪುರದ ವಿವಿಧ ವಲಯಗಳು, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಭಾಗದಲ್ಲಿ ಜೋರು ಮಳೆಯಾಗಿದೆ. ಬಿಆರ್ಟಿಯ 5 ವಲಯಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಗುಂಡ್ಲುಪೇಟೆ ತಾಲೂಕಿನ ಶಿವಪುರ, ಬೊಮ್ಮಲಾಪುರ, ಹಂಗಳ ಗ್ರಾಮಗಳ ಸುತ್ತಮುತ್ತ ಆಲಿಕಲ್ಲು ಮಳೆ ಬಿದ್ದಿದ್ದು ಕಾಡಂಚಿನ ಗ್ರಾಮಗಳಲ್ಲೂ ಮೊದಲ ವರ್ಷಧಾರೆ ಸುರಿದಿದೆ. ಬಿಸಿಲ ಝಳಕ್ಕೆ ಕಾಡಿಗೆ ಬೆಂಕಿ ಬೀಳುವ ಆತಂಕ ದೂರವಾಗಿದೆ.
ಮಳೆ ತೀವ್ರವಾಗಿ ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ 5 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿತ್ತು. ಕಳೆದ 4-5 ತಿಂಗಳುಗಳಿಂದ ಒಂದು ಮಳೆಯೂ ಬೀಳದೆ ಕೆರೆ-ಕಟ್ಟೆಗಳು ಬತ್ತಿ ಹೋಗಿದ್ದವು. ಜನ-ಜಾನುವಾರುಗಳು ಕುಡಿಯುವ ನೀರಿಗೂ ತಾತ್ವಾರಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ:ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆರಾಯನ ಅಬ್ಬರ: ಹವಾಮಾನ ಇಲಾಖೆ ಮುನ್ಸೂಚನೆ - Rainfall Alert