ಬೆಂಗಳೂರು :ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ಪಾಸ್ ಮಾಡಿಸುವುದಾಗಿ ನಂಬಿಸಿ ಹಣ ಗಳಿಸುತ್ತಿದ್ದ ಆರೋಪಿಯನ್ನ ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೆಜೆಸ್ಟಿಕ್‌ನಲ್ಲಿರುವ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗೋವಿಂದರಾಜು (49) ಬಂಧಿತ ಆರೋಪಿ.
ಮಧ್ಯವರ್ತಿಗಳ ಸಹಾಯದಿಂದ ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದ ಆರೋಪಿ, 'ತನಗೆ ಪರೀಕ್ಷೆಗೆ ಸಂಬಂಧಿಸಿದಂತಹ ಕೆಲ ಅಧಿಕಾರಿಗಳ ಪರಿಚಯವಿದ್ದು, ಪರೀಕ್ಷೆಯಲ್ಲಿ ಪಾಸ್ ಮಾಡಿಸಿ ಹುದ್ದೆ ಕೊಡಿಸುವುದಾಗಿ' ನಂಬಿಸಿದ್ದ.
ಅಭ್ಯರ್ಥಿಗಳಿಂದ ಪಿಡಿಒ ಹುದ್ದೆಗೆ 25 ಲಕ್ಷ ಹಾಗೂ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಪಾಸ್ ಮಾಡಿಸಲು 50 ಲಕ್ಷ ರೂಪಾಯಿಗೆ ಮಾತನಾಡಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಖಾಲಿ ಬಿಟ್ಟು ಬರುವಂತೆ ತಿಳಿಸಿ, ನಂತರ ತಾನು ಸರಿಯಾದ ಉತ್ತರಗಳನ್ನು ತುಂಬಿಸಿ ಪಾಸ್ ಮಾಡಿಸುವುದಕ್ಕೆ ಗ್ಯಾರಂಟಿಯಾಗಿ ಅಭ್ಯರ್ಥಿಗಳ ಎಸ್ಎಸ್ಎಲ್‌ಸಿ ಮತ್ತು ಪದವಿ ಸರ್ಟಿಪಿಕೇಟ್, ಪರೀಕ್ಷಾ ಪ್ರವೇಶ ಪತ್ರಗಳು, ಚೆಕ್‌ಗಳನ್ನ ಪಡೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ. ಭಾನುವಾರ ನಡೆದ ಕೆಎಎಸ್ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ಅಭ್ಯರ್ಥಿಯೊಬ್ಬರ ಕಡೆಯವರನ್ನು ಭೇಟಿಯಾಗಲು ವಿಜಯನಗರಕ್ಕೆ ಬಂದಿದ್ದಾಗ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಡಿಸಿಪಿ ಎಸ್.ಗಿರೀಶ್ ಮಾಹಿತಿ (ETV Bharat) ಮೊಬೈಲ್ ಫೋನ್‌ನಲ್ಲಿ 46 ಜನ ಅಭ್ಯರ್ಥಿಗಳ ಹೆಸರು ಮತ್ತು ಅದರ ಮುಂದೆ ಚೆಕ್ ಮತ್ತು ಡಾಕ್ಯುಮೆಂಟ್ ಎಂದು ನಮೂದಿಸಿರುವ ಫೋಟೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದು, ಆ ಅಭ್ಯರ್ಥಿಗಳು ಯಾರು ಎಂಬುದರ ಕುರಿತು ಕೂಲಂಕಷವಾದ ತನಿಖೆ ನಡೆಸಲಾಗುತ್ತಿದೆ. ಆರೋಪಿಯು ಅಭ್ಯರ್ಥಿಗಳಿಂದ ಪಡೆದ ಕೆಲವು ದಾಖಲಾತಿ ಮತ್ತು ಚೆಕ್‌ಗಳನ್ನು ಮಧ್ಯವರ್ತಿಗಳಿಗೆ ನೀಡಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಮಾಹಿತಿ:''ಶನಿವಾರ ಹಾಗೂ ಭಾನುವಾರ ಒಂದಷ್ಟು ಸರ್ಕಾರಿ ಹುದ್ದೆಗಳಿಗಾಗಿ ನೇಮಕಾತಿ ಪರೀಕ್ಷೆಗಳಾಯ್ತು. ಆ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದವರ ವಿರುದ್ಧ ಕಾರ್ಯಾಚರಣೆ ಮಾಡಿದಾಗ ಗೋವಿಂದರಾಜು ಎಂಬಾತನನ್ನ ಬಂಧಿಸಲಾಗಿದೆ. ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವುದಾಗಿ ಭರವಸೆ ನೀಡುತ್ತಿದ್ದ ಆರೋಪಿ, ಅದಕ್ಕಾಗಿ ಅಭ್ಯರ್ಥಿಗಳಿಂದ ಹಾಲ್ ಟಿಕೆಟ್, ಚೆಕ್‌ಗಳನ್ನ ಪಡೆದುಕೊಳ್ಳುತ್ತಿದ್ದ. ಆತನೊಂದಿಗೆ ಒಂದಷ್ಟು ಜನ ರಾಜ್ಯದ ಬೇರೆ ಬೇರೆ ಭಾಗದವರು ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. ಈತ ಹೇಳಿದಂತೆ ಯಾರಿಗೂ ಪಾಸ್ ಮಾಡಿಸಿ ಕೊಟ್ಟಿಲ್ಲ, ಆದರೆ ಪಾಸ್ ಮಾಡಿಸುವುದಾಗಿ ಚೆಕ್‌ಗಳನ್ನ ಪಡೆಯುತ್ತಿದ್ದ. ಪ್ರಕರಣದ ಸಂಬಂಧ ಒಂದಷ್ಟು ಜನರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಿದ್ದೇವೆ. ಆರೋಪಿ ಮತ್ತು ಪರೀಕ್ಷಾ ಪ್ರಾಧಿಕಾರಕ್ಕೆ ಯಾವುದೇ ಸಂಪರ್ಕವಿಲ್ಲ. ಇದೇ ರೀತಿ ಹಲವು ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದ'' ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದರು.
ಇದನ್ನೂ ಓದಿ:ಕೆಪಿಎಸ್ಸಿ ಪರೀಕ್ಷೆಯಲ್ಲಿ ಮತ್ತೆ ತಪ್ಪುಗಳು ; ಮರು ಪರೀಕ್ಷೆ ನಡೆಸುವಂತೆ ಕಾರ್ಯದರ್ಶಿಗೆ ಪತ್ರ - MISTAKES IN KPSC EXAM