ಕರ್ನಾಟಕ

karnataka

ETV Bharat / state

ರಾಯಚೂರು : ಅನ್ನಭಾಗ್ಯದ ಅಕ್ಕಿ ರೈಸ್​ಮಿಲ್​ನಲ್ಲಿ ಪತ್ತೆ, 31 ಕ್ವಿಂಟಾಲ್​ ಅಕ್ಕಿ ವಶಕ್ಕೆ - ರಾಯಚೂರು

ಮಾನ್ವಿ ತಾಲೂಕಿನ ಚೀಕಲಪರ್ವಿ ರಸ್ತೆಯಲ್ಲಿ ಬರುವ ರೈಸ್ ಮಿಲ್​ವೊಂದರಲ್ಲಿ ಅನ್ನಭಾಗ್ಯದ ಅಕ್ಕಿ ಪತ್ತೆಯಾಗಿದೆ.

ರಾಯಚೂರು
ರಾಯಚೂರು

By ETV Bharat Karnataka Team

Published : Feb 6, 2024, 5:12 PM IST

Updated : Feb 7, 2024, 6:51 AM IST

ರಾಯಚೂರು : ಪಡಿತರದಾರರಿಗೆ ಹಂಚಿಕೆ ಮಾಡುವ ಅನ್ನಭಾಗ್ಯದ ಅಕ್ಕಿ ಜಿಲ್ಲೆಯ ರೈಸ್ ಮಿಲ್​ವೊಂದರಲ್ಲಿ ಪತ್ತೆಯಾಗಿದೆ. ಆಹಾರ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿ ನಡೆಸಿದ ದಾಳಿ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಜಿಲ್ಲೆಯ ಮಾನ್ವಿ ತಾಲೂಕಿನ ಚೀಕಲಪರ್ವಿ ರಸ್ತೆಯಲ್ಲಿ ಬರುವ ರೈಸ್ ಮಿಲ್​ವೊಂದರ ಮೇಲೆ ಎರಡೂ ಇಲಾಖೆಯ ಸಿಬ್ಬಂದಿ ನಿನ್ನೆ ಜಂಟಿಯಾಗಿ ದಾಳಿ ನಡೆಸಿದ್ದರು.

ಈ ಸಂದರ್ಭದಲ್ಲಿ ರೈಸ್ ಮಿಲ್​ನಲ್ಲಿದ್ದ 31 ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಪತ್ತೆಯಾಗಿದೆ. ಈಗಾಗಲೇ ಅಕ್ಕಿಯನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಬಡವರಿಗೆ ಹಂಚಿಕೆ ಮಾಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿ ದೇವರಾಜು ಹಾಗೂ ಮಾನ್ವಿ ಪೊಲೀಸ್ ಠಾಣೆ ಪಿಐ ವಿರೇಂದ್ರಯ್ಯ ಹಿರೇಮಠ ನೇತೃತ್ವದಲ್ಲಿ ದಾಳಿ ಮಾಡಿ 31 ಕ್ವಿಂಟಾಲ್ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿದೆ.

ಸೋಮವಾರ ರಾತ್ರಿ ವೇಳೆ ದಾಳಿ ನಡೆಸಲಾಗಿದ್ದು, ಬಳಿಕ ಸ್ಥಳಕ್ಕೆ ಆಹಾರ ಮತ್ತು ನಾಗರೀಕ ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರಾ ಅವರು ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬಡಕುಟುಂಬಗಳಿಗೆ ಉಚಿತವಾಗಿ ವಿತರಣೆಯಾಗುವ ಪಡಿತರ ಅಕ್ಕಿ ಎಂದು ದಾಳಿ ವೇಳೆ ಕಂಡುಬಂದಿದೆ.

ರೈಸ್‌ಮಿಲ್ ಮಾಲೀಕರ ವಿರುದ್ಧ ಪ್ರಕರಣ : ಪಡಿತರದಾರರಿಗೆ ವಂಚಿಸಿ ಅವರಿಂದ ಕಡಿಮೆ ಬೆಲೆಗೆ ಖರೀದಿಸಲಾಗುತ್ತಿತ್ತು. ಈ ಅಕ್ಕಿಯನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಲಾಗುತ್ತಿತ್ತು. ಹೀಗೆ ಅಕ್ರಮವಾಗಿ ಸಂಗ್ರಹ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ನಿರೀಕ್ಷಕ ದೇವರಾಜ ಅವರು ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ರೈಸ್‌ಮಿಲ್ ಮಾಲೀಕರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ.

ಮಾನ್ವಿ ತಾಲೂಕಿನಲ್ಲಿ ವ್ಯಾಪಕವಾಗಿ ಅಕ್ರಮ ಅನ್ನಭಾಗ್ಯ ದಂಧೆ ನಡೆಯುತ್ತಿದ್ದು, ಅಂತಾರಾಜ್ಯ ವ್ಯಾಪ್ತಿಗೆ ಹರಡಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆ ಪಡಿತರದಾರರಿಗೆ ಸರಿಯಾದ ರೀತಿಯಲ್ಲಿ ತಲುಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ನ್ಯಾಯ ಬೆಲೆ ಅಂಗಡಿಯ ಮಾಲೀಕರು ಅಕ್ರಮ ದಂಧೆಕೋರರಿಗೆ ಅನ್ನಭಾಗ್ಯ ಪಡಿತರ ಧಾನ್ಯಗಳನ್ನು ಅಲ್ಲೇ ಬಿಟ್ಟುಕೊಡುವ ವ್ಯವಹಾರ ನಡೆದಿರುವುದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ.

ಅಂಗಡಿ ಮಾಲೀಕರೇ ಅನ್ನಭಾಗ್ಯಕ್ಕೆ ಕನ್ನ ಹಾಕುತ್ತಿದ್ದಾರೆಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಅಲ್ಲದೆ ಜಿಲ್ಲೆಯಲ್ಲಿ ಈ ರೀತಿಯಾಗಿ ಅನ್ನಭಾಗ್ಯದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ಮಾಡುವಾಗ, ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಕಡೆ ದಾಳಿ ನಡೆಸಿ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿದೆ. ಆದರೆ ಇದಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕುವುದು ಅವಶ್ಯಕವಾಗಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.

ಇದನ್ನೂ ಓದಿ :ವಿಜಯಪುರ: ಪಡಿತರ ಅಕ್ಕಿ ಅಕ್ರಮ ಸಾಗಾಟ; ಲಾರಿಸಮೇತ ಆರೋಪಿಗಳ ಬಂಧನ

Last Updated : Feb 7, 2024, 6:51 AM IST

ABOUT THE AUTHOR

...view details