ಬೆಂಗಳೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಲು ಲೋಕಾಯುಕ್ತ ಮುಂದಾಗಿದೆ. ಪೂರ್ವನಿಯೋಜಿತವಾಗಿ ತನಿಖಾ ವರದಿ ರೂಪಿಸಲಾಗಿದೆ. ಆದರೆ, ಬಿಜೆಪಿಯಿಂದ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದವರು ನಡೆಸಿದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಿದೆ. ಜೊತೆಗೆ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಈ ಹಗರಣದಲ್ಲಿ ತಪ್ಪಿಲ್ಲ ಎಂದಾದರೆ ಸಿಎಂ ಸಿದ್ದರಾಮಯ್ಯ ನಿವೇಶನಗಳನ್ನು ಯಾಕೆ ಮರಳಿಸಬೇಕಿತ್ತು? ಲೋಕಾಯುಕ್ತ, ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಲಿದೆ. ಇದರಲ್ಲಿ ಯಾರದ್ದೂ ತಪ್ಪಿಲ್ಲ. ಸ್ವಯಂಚಾಲಿತವಾಗಿ ಭೂ ಪರಿವರ್ತನೆಯಾಗಿದೆ. ಲೇಔಟ್ ಮಾಡಿರುವುದೇ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಅವರು ಅಷ್ಟು ಪ್ರಾಮಾಣಿಕರು ಹಾಗೂ ಸಭ್ಯಸ್ತರು. ಇದರಲ್ಲಿ ಅಧಿಕಾರಿಗಳದ್ದೇ ತಪ್ಪು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಲಿದೆ. ಈ ಪ್ರಕರಣ ದಾಖಲಾಗುವ ಮುನ್ನವೇ ಲೋಕಾಯುಕ್ತದಲ್ಲಿ ಆಯಕಟ್ಟಿನ ಜಾಗಕ್ಕೆ ನಿರ್ದಿಷ್ಟ ಅಧಿಕಾರಿಗಳು ಬಂದು ಕೂತಿದ್ದಾರೆ. ಇದು ಪೂರ್ವನಿಯೋಜಿತವಾಗಿ ತಯಾರಿಸಿದ ವರದಿ ಎಂದು ದೂರಿದರು.
ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಾಕ್ಷಣ ಅದನ್ನು ಕೋರ್ಟ್ ಸ್ವೀಕರಿಸಬೇಕೆಂದೇನಿಲ್ಲ. ಕೋರ್ಟ್ ಅದನ್ನು ತಿರಸ್ಕರಿಸಿದರೆ ಮತ್ತೆ ತನಿಖೆ ನಡೆಯಲಿದೆ. ನಮಗೆ ನ್ಯಾಯಾಂಗದ ಬಗ್ಗೆ ವಿಶ್ವಾಸವಿದೆ. ನಮಗಿಂತ ಹೆಚ್ಚಾಗಿ ಸಿಎಂ ಕನಸು ಕಟ್ಟಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ನಿದ್ರೆ ಹಾರಿಹೋಗಲಿದೆ ಎಂದರು.