ಬೆಂಗಳೂರು:'ಕನ್ನಡಿಗರಿಗೆ ಉದ್ಯೋಗ ಸಿಗಬೇಕೆನ್ನುವ ಬದ್ಧತೆ ಇದ್ದಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಡಬಹುದಿತ್ತಲ್ಲ?. ಎಲ್ಲದಕ್ಕೂ ಕೇಂದ್ರಕ್ಕೆ ಪತ್ರ ಬರೆಯುವ, ಎಲ್ಲದಕ್ಕೂ ಕೇಂದ್ರ ಮಂತ್ರಿಗಳಿಗೆ ಮನವಿ ಪತ್ರ ಕೊಡುವ ತಾವು ಇ-ಬಸ್ ಯೋಜನೆ ವಿಚಾರದಲ್ಲಿ ಮಾತ್ರ ಯಾಕೆ ಈ ಕೆಲಸ ಮಾಡಲಿಲ್ಲ' ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಉತ್ತರಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿರುಗೇಟು ನೀಡಿರುವ ಅಶೋಕ್, 'ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಟ್ವೀಟ್ ನಾಚಿಕೆಗೇಡಿತನದ ಪರಮಾವಧಿಯೋ ಅಥವಾ ನಾನಿನ್ನೂ ಸಿಎಂ ಕುರ್ಚಿಯಲ್ಲಿ ಕೂತಿದ್ದೇನೆ ಎಂದು ತೋರಿಸುವ ಅನಿವಾರ್ಯತೆಯೋ ಅರ್ಥವಾಗುತ್ತಿಲ್ಲ. ನಿಮ್ಮ ರೀತಿಯ ಅಹಂಕಾರದ ಮಾತುಗಳು ನನಗೆ ಬರುವುದಿಲ್ಲ. ಅದು ನನಗೆ ಬೇಡವೇ ಬೇಡ. ಆದರೆ, ಜೂನ್ 4ರಂದು ಯಾರು ಯಾರಿಗೆ ದೊಣ್ಣೆ ಕೊಟ್ಟು ಹೊಡಿಸಿಕೊಳ್ಳುತ್ತಾರೆ. ಜೂನ್ 4ರ ನಂತರ ಬಡಿಗೆಯಿಂದ ಹೊಡೆದು ಯಾರು ಯಾರನ್ನು ಕುರ್ಚಿಯಿಂದ ಕೆಳಗಿಳಿಸುತ್ತಾರೆ ನೋಡೋಣ.'.
'ತಾವು ಅಪರೂಪಕ್ಕೆ ತಮ್ಮ ಪ್ರಗಾಢ ನಿದ್ದೆಯಿಂದ ಎದ್ದು ನನ್ನ ಒಂದು ಟೀಕೆಗೆ ಉತ್ತರ ನೀಡುವ ಶ್ರಮ ತೆಗೆದುಕೊಂಡಿದ್ದೀರಿ. ಮೊದಲು ಅದಕ್ಕೆ ಅಭಿನಂದನೆಗಳು. ಆದರೆ, ಅದರಲ್ಲೂ ಮೈಯೆಲ್ಲಾ ಎಣ್ಣೆ ಸವರಿಕೊಂಡಿರುವಂತೆ ತಮ್ಮ ಕರ್ತವ್ಯದಿಂದ ಜಾರಿಕೊಂಡು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೋರಿಸುತ್ತೀರಲ್ಲ ತಮ್ಮ ಭಂಡತನಕ್ಕೆ ಏನು ಹೇಳಬೇಕು. ಪತ್ರಿಕೆಗಳಲ್ಲಿ ಹತ್ತಾರು ಕೋಟಿ ಖರ್ಚು ಮಾಡಿ ಪುಟಗಟ್ಟಲೆ ಜಾಹೀರಾತು ಕೊಡುವಾಗ ಅದು ನಿಮ್ಮ ಯೋಜನೆ. ಹಸಿರು ಬಾವುಟ ತೋರಿಸಿ ಬಸ್ಸಿಗೆ ಚಾಲನೆ ನೀಡುವಾಗ ಅದು ತಮ್ಮ ಸರ್ಕಾರದ ಕೊಡುಗೆ. ಆದರೆ, ಅದರಲ್ಲಿ ನ್ಯೂನತೆಗಳು ಕಂಡು ಬಂದರೆ ಅದು ಕೇಂದ್ರ ಸರ್ಕಾರದ ಹೊಣೆ. ಇದು ಯಾವ ಸೀಮೆ ಆಡಳಿತ ಸ್ವಾಮಿ?ತಮಗೆ ಕರ್ನಾಟಕದ ಜನತೆ ಅಧಿಕಾರ ಕೊಟ್ಟಿರುವುದು ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಕೈಚೆಲ್ಲಿ ಕುಳಿತುಕೊಳ್ಳಲಿ ಅಂತ ಅಲ್ಲ.'