ಹಾವೇರಿ: ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯೊಬ್ಬರಿದ್ದಾರೆ. ಅವರೇ ಪ್ರಕಾಶ್, ಇವರಿಗೆ ಬಾಲ್ಯದಿಂದಲೂ ಪುನೀತ್ ರಾಜಕುಮಾರ್ ಕಂಡರೆ ಅಚ್ಚುಮೆಚ್ಚು. ಪುನೀತ್ ಅಭಿನಯಿಸಿರುವ ಚಿತ್ರಗಳು ಬಿಡುಗಡೆಯಾದರೇ ಸಾಕು, ಈ ಅಭಿಮಾನಿಗೆ ಎಲ್ಲಿಲ್ಲದ ಸಂತಸ. ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಬೇಕು, ಅವರ ಜೊತೆ ನಟಿಸಬೇಕು ಎನ್ನುವ ಅದಮ್ಯ ಆಸೆಯಿತ್ತು. ಆದರೆ ಪುನೀತ್ ಅವರನ್ನು ಹತ್ತಿರದಿಂದ ನೋಡಿದ್ದು ಬಿಟ್ಟರೆ ಅವರ ಭೇಟಿ ಸಾಧ್ಯವಾಗಲೇ ಇಲ್ಲ.
ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವು ಅಭಿಮಾನಿ ಪ್ರಕಾಶ್‌ಗೆ ಇನ್ನಿಲ್ಲದ ನೋವು ತಂದಿತ್ತು. ಅವರ ಜೊತೆ ನಟಿಸುವ ಆಸೆ ಈಡೇರಲಿಲ್ಲ, ಕೊನೆಯ ಪಕ್ಷ ಅವರ ದೇವಸ್ಥಾನ ಕಟ್ಟಿಸುವ ಚಿಂತನೆಯನ್ನು ಪ್ರಕಾಶ್ ಕಂಡರು. ಅದರಂತೆ ತಮ್ಮ ಮನೆಗೆ ಹೊಂದಿಕೊಂಡಂತೆ ಪ್ರಕಾಶ್ ಚಿಕ್ಕದಾದ ದೇವಸ್ಥಾನ ಕಟ್ಟಿಸಿದ್ದಾರೆ. ದೇವಸ್ಥಾನಕ್ಕೆ ಡಾ. ಪುನೀತ್ ರಾಜಕುಮಾರ್ ದೇವಾಲಯ ಎಂದು ಹೆಸರಿಟ್ಟಿದ್ದಾರೆ. ಹಾಗೇ ಪುನೀತ್ ರಾಜಕುಮಾರ್ ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನು ಅಗಡಿ ಗ್ರಾಮದ ಕಲಾವಿದನಿಗೆ ವಹಿಸಿದ್ದು, ಪ್ರತಿಮೆ ಸಹ ನಿರ್ಮಾಣವಾಗಿದೆ. ಅದಕ್ಕೆ ಅಂತಿಮ ಹಂತದ ಟಚ್ ನೀಡಬೇಕಾಗಿದೆ.
ಅಶ್ವಿನಿ ಪುನೀತ್ ಅವರಿಂದ ಉದ್ಘಾಟಿಸುವ ಬಯಕೆ:ತಾನು ನಿರ್ಮಿಸಿರುವ ಪುನೀತ್ ರಾಜಕುಮಾರ್ ದೇವಸ್ಥಾನದ ಪ್ರತಿಮೆಯನ್ನು ಅವರ ಪತ್ನಿ ಅಶ್ವಿನಿ ಪುನೀತ್ ಅವರು ಉದ್ಘಾಟಿಸಬೇಕು ಎಂಬ ಮಹದಾಸೆ ಪ್ರಕಾಶ್ ಅವರದ್ದು. ಈಗಾಗಲೇ ಬೆಂಗಳೂರಿಗೆ ಎರಡ್ಮೂರು ಬಾರಿ ಹೋಗಿ ಅಶ್ವಿನಿ ಪುನೀತ್ರಾಜಕುಮಾರ್ ಅವರನ್ನು ಭೇಟಿ ಮಾಡಿರುವ ಪ್ರಕಾಶ್, ದಿನಾಂಕ ಸಹ ನಿಗದಿ ಮಾಡಿಕೊಂಡು ಬಂದಿದ್ದಾರೆ. ಅಂದುಕೊಂಡಂತೆ ಎಲ್ಲ ನಡೆದರೆ ಸೆಪ್ಟಂಬರ್ 26 ರಂದು ಯಲಗಚ್ಚ ಗ್ರಾಮದಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ದೇವಸ್ಥಾನ ಉದ್ಘಾಟನೆಯಾಗಲಿದೆ. ಆ ಮೂಲಕ ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪುನೀತ್ ರಾಜಕುಮಾರ್ ಅವರ ದೇವಾಲಯ ಲೋಕಾರ್ಪಣೆ ಆಗಲಿದೆ.