ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈ ಸಂಬಂಧ ಆಯಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಇದರ ಜೊತೆಗೆ ಕೆಲವು ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸಿ ತಾಣಗಳಾದ ಶಿವಗಂಗೆ ಬೆಟ್ಟ, ಸಿದ್ದರಬೆಟ್ಟ, ಮಾಕಳಿದುರ್ಗ, ಆವತಿ ಬೆಟ್ಟ ಮತ್ತು ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇಂದು (ಡಿಸೆಂಬರ್ 31) ಸಂಜೆ 6ರಿಂದ ನಾಡಿದ್ದು (ಜನವರಿ 1) ಬೆಳಗ್ಗೆ 7ರ ವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಆದೇಶಿಸಿದ್ದಾರೆ.
ಹೊಸ ವರ್ಷದಾಚರಣೆ ಹಿನ್ನಲೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಾರ್ವಜನಿಕರು ಮೋಜು ಮಸ್ತಿ ಮಾಡುವ ಮೂಲಕ ಕಾನೂನು ವ್ಯವಸ್ಥೆಗೆ ಭಂಗ ತರುವ ಕಾರಣಕ್ಕೆ ಡಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರಿನ ಪ್ರವಾಸಿತಾಣಗಳಿಗೆ ನಿರ್ಬಂಧ: ಡಿ.31ರ ಸಂಜೆ 6 ಗಂಟೆಯಿಂದ ಜ.1 ರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಿಗೆ ಪ್ರವಾಸಿಗರ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸಿದ್ಧ ಪ್ರವಾಸಿ ಕೇಂದ್ರಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ದೇವರಮನೆ, ಝರಿಫಾಲ್ಸ್ ಸೇರಿದಂತೆ ಪ್ರಮುಖ ಪ್ರವಾಸಿತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ರೆಸಾರ್ಟ್, ಹೋಂ ಸ್ಟೇ, ಲಾಡ್ಜ್, ರೆಸ್ಟೋರೆಂಟ್ ಮಾಲೀಕರ ಸಭೆ ನಡೆಸಿ ಎಚ್ಚರಿಕೆ ನೀಡಲಾಗಿದೆ. ನ್ಯಾಯಾಲಯದ ಆದೇಶದಂತೆ ರಾತ್ರಿ 10 ಗಂಟೆ ನಂತರ ಸಾರ್ವಜನಿಕವಾಗಿ ಸೌಂಡ್‌ಸಿಸ್ಟಮ್ ಬಳಕೆ ಮಾಡುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ ಎಂದರು.
ರೇವ್ ಪಾರ್ಟಿ, ಮಾದಕ ದ್ರವ್ಯಗಳ ಸೇವನೆ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದು. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು, ವ್ಹೀಲಿಂಗ್ ಸೇರಿದಂತೆ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಚಟುವಟಿಕೆಯಲ್ಲಿ ತೊಡಗಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅತಿ ವೇಗವಾಗಿ ವಾಹನ ಚಲಾಯಿಸುವುದನ್ನು ತಡೆಯಲು ಜಿಗ್ಜಾಗ್ ಮಾದರಿಯಲ್ಲಿ ಬ್ಯಾರಿ ಕೇಡ್ಗಳನ್ನು ಹಾಕಿದ್ದು, ಸಂಜೆ 6 ಗಂಟೆಯಿಂದಲೇ ಪೊಲೀಸರು ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲಿದ್ದಾರೆ ಎಂದು ಹೇಳಿದರು.
ಸಿ.ಎಲ್- 5 ಪರವಾನಿಗೆ ಪಡೆದುಕೊಂಡವರು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಯವಾಗಿದೆ.
ಸಾರ್ವಜನಿಕವಾಗಿ ಅಸಭ್ಯ ನಡವಳಿಕೆ ಕಂಡು ಬಂದರೆ 112 , ಪೊಲೀಸ್ ಕಂಟ್ರೋಲ್ ರೂಂಗೆ ದೂರು ನೀಡಬೇಕು. ಯಾವುದೇ ಸಂಘ - ಸಂಸ್ಥೆ ಪ್ರತಿನಿಧಿಗಳು ಕಾನೂನನ್ನು ಕೈಗೆತ್ತಿಕೊಳ್ಳದಂತೆಯೂ ಎಚ್ಚರಿಕೆ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಗಳು ಜಾರಿ:ಮೈಸೂರು ನಗರದಲ್ಲಿ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರು ನಗರ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಹಿನ್ನೆಲೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಈ ಕುರಿತು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು, ಕಾರ್ಯಕ್ರಮವನ್ನು ನಡೆಸಬೇಕು. ಕಾರ್ಯಕ್ರಮ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ, ಮಾದಕ ವಸ್ತುಗಳ ಸೇವನೆ, ಜೂಜಾಟಕ್ಕೆ ನಿಷೇಧಿಸಲಾಗಿದೆ. ಶುಭ ಕೋರುವ ನೆಪದಲ್ಲಿ ಕೀಟಲೆ, ಕಿರಿಕಿರಿ ಉಂಟುಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಚಾಮುಂಡಿ ಬೆಟ್ಟ ಪ್ರವೇಶಿಸಲು ಇರುವ ವಿವಿಧ ಗೇಟ್ಗಳು ಕ್ಲೋಸ್: ಹೊಸ ವರ್ಷಾಚರಣೆಯ ಹಿನ್ನೆಲೆ ಡಿ.31ರ ರಾತ್ರಿ 7 ಗಂಟೆ ನಂತರ ಉತ್ತನಹಳ್ಳಿ ಕ್ರಾಸ್ ಗೇಟ್, ದೇವಿವನ ಗೇಟ್, ಚಾಮುಂಡಿ ಬೆಟ್ಟ ಪಾದದ ಗೇಟ್, ಲಲಿತ್ಮಹಲ್ ಗೇಟ್ ಮೂಲಕ ಚಾಮುಂಡಿ ಬೆಟ್ಟ ಪ್ರವೇಶಿಸುವುಸದನ್ನು ನಿರ್ಬಂಧಿಸಲಾಗಿದೆ. ಡಿ.31ರ ರಾತ್ರಿ 9 ಗಂಟೆ ನಂತರ ಸಾರ್ವಜನಿಕರು ಚಾಮುಂಡಿ ಬೆಟ್ಟದಿಂದ ವಾಪಸ್ ಆಗಬೇಕಿದೆ.
1 ಗಂಟೆಯ ವರೆಗೆ ಮಾತ್ರ ಅವಕಾಶ: ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಹೋಂ ಸ್ಟೇ, ಸರ್ವಿಸ್ ಅಪಾರ್ಟ್ಮೆಂಟ್, ಮಾಲ್ಗಳು ಪೊಲೀಸ್ ಆಯುಕ್ತರ ಕಚೇರಿಯಿಂದ ಅನುಮತಿ ಪಡೆದು ಜ.1ರ ನಸುಕಿನ ಜಾವ 1 ಗಂಟೆ ವರೆಗೆ ಮಾತ್ರ ವರ್ಷಾಚರಣೆ ಮಾಡಬೇಕು ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಕ್ರಮ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಭದ್ರತೆಗಾಗಿ 4 ಡಿಸಿಪಿ, 12ಎಸಿಪಿ, 32ಪಿಐ, 53ಪಿಎಸ್ಐ, 112ಎಎಸ್ಐ, 895 ಪಿಸಿ ಮತ್ತು 79 ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 1,186 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.
ಕಾವೇರಿ ನದಿ ತೀರದಲ್ಲಿ ಹೊಸ ವರ್ಷಾಚರಣೆಗೆ ನಿಷೇಧ: ಹೊಸ ವರ್ಷಾಚರಣೆ ಹಿನ್ನೆಲೆ ಮಂಡ್ಯ ಜಿಲ್ಲಾದ್ಯಂತ ಪ್ರಮುಖ ಪ್ರವಾಸಿ ಸ್ಥಳಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಹಿನ್ನೀರು ಸೇರಿದಂತೆ ಬಲಮುರಿ, ಎಡಮುರಿ, ಕಾವೇರಿ ನದಿ ತೀರದಲ್ಲಿ ಮೋಜು ಮಸ್ತಿ ಮಾಡದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಕಟ್ಟಾಜ್ಞೆ ಹೊರಡಿಸಿದ್ದಾರೆ.
ನಾಳೆ ಬೆಳಗ್ಗೆ 6 ಗಂಟೆಯಿಂದ ಜ.1ರ ರಾತ್ರಿ 8 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ. ಇದರ ಜೊತೆಗೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾವೇರಿ ತೀರದಲ್ಲೂ ನಿಷೇಧಾಜ್ಞೆ ವಿಧಿಸಲಾಗಿದ್ದು, ನಿಯಮ ಮೀರಿ ಕಾವೇರಿ ತೀರದಲ್ಲಿ ಮೋಜು ಮಸ್ತಿಗೆ ಹೋದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆ ಸ್ಥಳಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನೆಪದಲ್ಲಿ ಮದ್ಯಪಾನ, ಗಾಂಜಾ ಸೇರಿದಂತೆ ಮೋಜು ಮಸ್ತಿ ಮಾಡಲಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: 7 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ, ಖಾಕಿ ಸರ್ಪಗಾವಲು