ಕರ್ನಾಟಕ

karnataka

ETV Bharat / state

ಮೈಸೂರು ಅರಮನೆ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಸಾರ್ವಜನಿಕರ ಅಸಮಾಧಾನ: ಯಾರು, ಏನಂದ್ರು? - PALACE ENTRY FEE

ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಪ್ರವೇಶ ಶುಲ್ಕ ಹೆಚ್ಚಿಸಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

MYSURU PALACE ENTRY FEE
ಮೈಸೂರು ಅರಮನೆ (ETV Bharat)

By ETV Bharat Karnataka Team

Published : Oct 25, 2024, 6:31 PM IST

ಮೈಸೂರು:ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆಯ ಪ್ರವೇಶ ಶುಲ್ಕವನ್ನು ಇಂದಿನಿಂದ ಹೆಚ್ಚಿಸಲಾಗಿದ್ದು ಇದಕ್ಕೆ ಪ್ರವಾಸಿಗರು, ಹೋಟೆಲ್‌ ಮಾಲೀಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಹೆಚ್ಚಾದ ದರವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ದರ ಹೆಚ್ಚಳ ಹೇಗಿದೆ?: ವಯಸ್ಕರಿಗೆ 100 ರೂ. ಇದ್ದ ಟಿಕೆಟ್‌ ದರ 120 ರೂಪಾಯಿಗೆ ಹೆಚ್ಚಿಸಿದರೆ, 10ರಿಂದ 18 ವರ್ಷ ಮಕ್ಕಳಿಗೆ 50 ರೂ. ಇದ್ದ ಟಿಕೆಟ್‌ ದರ 70 ರೂಪಾಯಿಗೆ ಮಾಡಲಾಗಿದೆ. ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ 30ರಿಂದ 50 ರೂಪಾಯಿಗೆ ಹೆಚ್ಚಳ ಮಾಡಿದರೆ, ವಿದೇಶಿ ಪ್ರವಾಸಿಗರಿಗೆ 100 ರೂ. ಇದ್ದ ಟಿಕೆಟ್‌ ಪ್ರವೇಶ ಶುಲ್ಕವನ್ನು ಏಕಾಏಕಿ 1,000 ರೂಪಾಯಿಗೆ ಹೆಚ್ಚಿಸಲಾಗಿದೆ.

ಅರಮನೆ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಸಾರ್ವಜನಿಕರ ಅಸಮಾಧಾನ (ETV Bharat)

ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಪರಿಷ್ಕೃತ ಅರಮನೆಯ ಪ್ರವೇಶ ದರವನ್ನು ವಾಪಸ್‌ ಪಡೆಯಬೇಕು. ಅರಮನೆ ವೀಕ್ಷಣೆ ಮಾಡಲು ಈಗ ನಿಗದಿಪಡಿಸಿದ ದರ ಹೆಚ್ಚಾಗಿದೆ. ಏಕಾಏಕಿ 100 ರೂಪಾಯಿಯಿಂದ 1,000 ರೂಪಾಯಿಗೆ ವಿದೇಶಿ ಪ್ರವಾಸಿಗರ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದು ತಪ್ಪು ಎಂದು ಹಲವರು ಹೇಳಿದ್ದಾರೆ.

ಅರಮನೆ ಪ್ರವೇಶ ಶುಲ್ಕ (ETV Bharat)

ಶುಲ್ಕ ಹೆಚ್ಚಳ ವಾಪಸ್‌ ಪಡೆಯಿರಿ: ''ಅರಮನೆಯ ಪ್ರವೇಶ ಶುಲ್ಕ ಹೆಚ್ಚಳ ಅವೈಜ್ಞಾನಿಕವಾಗಿದೆ. ವಿದೇಶಿ ಪ್ರವಾಸಿಗರಿಗೆ 10 ಪಟ್ಟು ದರ ಹೆಚ್ಚಿಸಲಾಗಿದೆ. ಕಳೆದ 10 ವರ್ಷಗಳಿಂದ ಮೈಸೂರಿಗೆ ಬರುವ ವಿದೇಶಿ ಪ್ರವಾಸಿಗರ ಪ್ರಮಾಣ ಕಡಿಮೆಯಾಗಿದೆ. ಈ ಕ್ರಮದಿಂದ ವಿದೇಶಿ ಪ್ರವಾಸಿಗರನ್ನು ನಾವು ಇನ್ನೂ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಮರು ಪರಿಶೀಲನೆ ಮಾಡಬೇಕು. ವಿದೇಶಿಗರಿಗೆ 300 ರೂಪಾಯಿ ಮಾಡಿದರೆ ಸೂಕ್ತ. ಏಕಾಏಕಿ 1000 ರೂಪಾಯಿ ಮಾಡಿದರೇ ಹೇಗೆ? ಮೈಸೂರಿಗೆ ಬನ್ನಿ ಎಂದು ಕರೆಯಬೇಕು, ಎಲ್ಲರೂ ಮಾರ್ಕೆಟ್‌ ಮಾಡಬೇಕು. ಯಾರು ಉಪ ನಿರ್ದೇಶಕರಿಗೆ ಈ ರೀತಿಯಾಗಿ ಮಾಡಿ ಅಂತ ಆದೇಶ ಕೊಡುತ್ತಾರೋ ಗೊತ್ತಿಲ್ಲ. ಈ ಅವೈಜ್ಞಾನಿಕ ದರ ಹಿಂಪಡೆದು, ವೈಜ್ಞಾನಿಕ ದರವನ್ನು ಅಳವಡಿಸಬೇಕು'' ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಆಗ್ರಹಿಸಿದರು.

ಮೈಸೂರು ಅರಮನೆ (ETV Bharat)

ದರ ಹೆಚ್ಚಳ ಬೇಸರ ತರಿಸಿದೆ:ಪ್ರವಾಸಿಗ ಸತೀಶ್ ಮಾತನಾಡಿ, ''ಅರಮನೆ ನೋಡಲು ಚೆನ್ನಾಗಿದೆ. ಆದರೆ, ಪ್ರವೇಶ ದರ ಹೆಚ್ಚಿಸಿದ್ದು ಬೇಸರ ತರಿಸಿತು. ಈ ರೀತಿ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ವಿದೇಶಿ ಪ್ರವಾಸಿಗರಿಗಂತೂ 10 ಪಟ್ಟು ಹೆಚ್ಚು ಮಾಡಿ ಅವರು ಇತ್ತ ತಲೆ ಹಾಕದಂತೆ ಮಾಡಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೈಸೂರು ಅರಮನೆಯ ಪ್ರವೇಶಕ್ಕೆ ಪರಿಷ್ಕೃತ ಶುಲ್ಕ ಶುಕ್ರವಾರದಿಂದಲೇ ಜಾರಿ; ಇಲ್ಲಿದೆ ಮಾಹಿತಿ

ABOUT THE AUTHOR

...view details