ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಉಪ ಸಮರದ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಮೂರು ಪಕ್ಷಗಳಲ್ಲಿ ಘಟಾನುಘಟಿ ನಾಯಕರ ಅಂತಿಮ ಸೆಣಸಾಟ ಜೋರಾಗಿದೆ.
ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣ, ಶಿಗ್ಗಾಂವ್ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಸಂಜೆ 5.30ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಸ್ಟಾರ್ ಪ್ರಚಾರಕರು, ಕ್ಷೇತ್ರಕ್ಕೆ ಸೇರದವರು ಆಯಾ ಕ್ಷೇತ್ರ ಬಿಟ್ಟು ತೆರಳಬೇಕಾಗುತ್ತದೆ. ಹೀಗಾಗಿ ಕೊನೆಯ ದಿನ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು, ಮುಖಂಡರು, ಕಾರ್ಯಕರ್ತರು ಬಿರುಸಿನ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದಾರೆ. ಬಳಿಕ ಮನೆ ಮನೆ ಪ್ರಚಾರ ಆರಂಭವಾಗಲಿದೆ.
ಪ್ರಚಾರ ಅಸ್ತ್ರ: ಇನ್ನು ಕಳೆದ ಒಂದೂವರೆ ತಿಂಗಳಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿವಾದ ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ಗೆ ಪ್ರಬಲ ಅಸ್ತ್ರವಾಗಿದೆ. ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಹಾಗೂ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದು, ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ದೇವೇಗೌಡರ ಕಣ್ಣೀರನ್ನು ಅಪಹಾಸ್ಯ ಮಾಡಿದ್ದು ಚರ್ಚೆಗೀಡಾಗಿದೆ. ಚುನಾವಣಾ ಕಣದಲ್ಲಿ ತೀವ್ರ ಪೈಪೋಟಿ ಎದುರಾಗಿದೆ.
ವಾಲ್ಮೀಕಿ ನಿಗಮ ಅವ್ಯವಹಾರ ಪರಿಶಿಷ್ಟ ಪಂಗಡದ ಮತದಾರರು ಹೆಚ್ಚಿರುವ ಸಂಡೂರು ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಬಲ ಅಸ್ತ್ರವಾಗಿದೆ. ಕಾಂಗ್ರೆಸ್ ಪರಿಶಿಷ್ಟ ಸಮುದಾಯದ ವಿರೋಧಿ ಎಂಬುದನ್ನು ಬಿಂಬಿಸಲು ಒಳ ಮೀಸಲಾತಿ ವಿಚಾರವನ್ನೂ ಬಿಜೆಪಿ ನಾಯಕರು ಉಲ್ಲೇಖಿಸಿ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಅಬಕಾರಿ ಇಲಾಖೆ ಭ್ರಷ್ಟಾಚಾರ ಆರೋಪ ಅಸ್ತ್ರವೂ ಸಿಕ್ಕಿದೆ. ಈ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.