ಬೆಂಗಳೂರು: ''ಯಾದಗಿರಿ PSI ಸಾವು ಪ್ರಕರಣವನ್ನು CIDಗೆ ನೀಡಲಾಗಿದೆ. ಪಿಎಸ್ಐ ಪರಶುರಾಮ್ ಪತ್ನಿಗೆ ಸರ್ಕಾರಿ ಕೆಲಸ ಕೊಡಬೇಕು ಅಂತ ನಾವು ತೀರ್ಮಾನ ಮಾಡಿದ್ದೇವೆ'' ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಯಾದಗಿರಿ ಪಿಎಸ್ಐ ಸಾವು ಪ್ರಕರಣ ಸಂಬಂಧ ಮಾತನಾಡಿದ ಅವರು, ''ಸಿಐಡಿ ತನಿಖೆಗೆ ಕೊಟ್ಟಿದ್ದೇವೆ. ಮೃತ ಪೊಲೀಸ್ ಹೆಂಡತಿಗೆ ಸರ್ಕಾರದಿಂದ ಉದ್ಯೋಗ ಕೊಡ್ತೀವಿ. ಪೋಸ್ಟ್ ಮಾರ್ಟಮ್ ರಿಪೋರ್ಟ್ ನಿರೀಕ್ಷೆ ಮಾಡ್ತಿದ್ದೇವೆ. ಅದು ಬಂದ ಮೇಲೆ ಯಾಕೆ ಸಾವಾಗಿದೆ ಅಂತ ಗೊತ್ತಾಗುತ್ತದೆ. ನಾಡಿದ್ದು ಅವರ ಮನೆಗೆ ಹೋಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಅವರಿಗೆ ಪರಿಹಾರ ಮತ್ತು ಉದ್ಯೋಗ ನೀಡುವ ಕೆಲಸ ಮಾಡುತ್ತೇವೆ. ಉದ್ಯೋಗ ಕೊಡಲು ಸಿಎಂ ಮತ್ತು ನಾನು ಚರ್ಚೆ ಮಾಡಿದ್ದೇವೆ'' ಎಂದರು.
ಶಾಸಕ ಮತ್ತು ಶಾಸಕನ ಪುತ್ರನ ಮೇಲೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ''ಈಗಾಗಲೇ CID ತನಿಖೆಗೆ ಕೊಡಲಾಗಿದೆ. ತನಿಖೆ ವರದಿ ಬರಲಿ. ತನಿಖೆಯಲ್ಲಿ ಶಾಸಕರು ಮತ್ತು ಅವರ ಪುತ್ರನ ಪಾತ್ರವಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ತೀವಿ'' ಎಂದು ಸ್ಪಷ್ಟಪಡಿಸಿದರು.
ಸುರ್ಜೇವಾಲ, ವೇಣುಗೋಪಾಲ್ ಸಭೆ ವಿಚಾರವಾಗಿ ಮಾತನಾಡಿ, ''ಸಿಎಂ ಬಗ್ಗೆ ಅನಾವಶ್ಯಕ ಆಪಾದನೆಗಳನ್ನು ಮಾಡಿ ವಿರೋಧ ಪಕ್ಷದವರು ಪಾದಯಾತ್ರೆ ಮಾಡಿ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಅದಕ್ಕೆ ಸರಿಯಾದ ಉತ್ತರ ಕೊಡಬೇಕು ಅಂತ ಹೇಳಿದ್ದಾರೆ. ಪ್ರತಿಯೊಬ್ಬ ಸಚಿವರು ಅದರ ಬಗ್ಗೆ ಮಾತಾಡಬೇಕು ಅಂತ ಹೇಳಿದ್ದಾರೆ. ನಾವು ಅದನ್ನು ಈಗಾಗಲೇ ಮಾಡ್ತಿದ್ದೇವೆ. ನಾವು ಕೂಡಾ ಅವರು ಎಲ್ಲೆಲ್ಲಿ ಪಾದಯಾತ್ರೆ ಮಾಡ್ತಿದ್ದಾರೆ ಅಲ್ಲಿಗೆ ಹಿಂದಿನ ದಿನ ನಾವು ಹೋಗಿ ಅನೇಕ ಪ್ರಶ್ನೆಗಳನ್ನು ಹಾಕ್ತಿದ್ದೇವೆ. ನಿಮ್ಮ ಕಾಲದಲ್ಲಿ ಏನಾಗಿತ್ತು ಅಂತ ಪ್ರಶ್ನೆ ಕೇಳ್ತಿದ್ದೇವೆ'' ಎಂದರು.