ಬೆಂಗಳೂರು: ಮಹಿಳಾ ಪಿಎಸ್ಐ ಜೊತೆಗಿರುವ ಫೋಟೋಗಳನ್ನು ಹಿಡಿದು, ಪ್ರೀತಿಸುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿ ಪಿಎಸ್ಐ (ಸಹಪಾಠಿ)ನನ್ನು ಚಂದ್ರಾಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂಜಯ್ ಕುಮಾರ್ ಬಂಧಿತ ವ್ಯಕ್ತಿ.
ಸಂಜಯ್ ಕುಮಾರ್ ಕರ್ನಾಟಕ ಕೈಗಾರಿಕಾ ಭದ್ರತಾಪಡೆಯಲ್ಲಿ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದರು. ಪಿಎಸ್ಐ ತರಬೇತಿ ಪಡೆಯುವಾಗ ಪರಿಚಯವಾಗಿದ್ದ ಸಂಜಯ್, ಮಹಿಳೆ ಬಳಿ ಪ್ರೇಮನಿವೇದನೆ ಮಾಡಿಕೊಂಡಿದ್ದರು. ಇದಕ್ಕೆ ಮಹಿಳಾ ಪಿಎಸ್ಐ ಒಲ್ಲೆ ಎಂದಿದ್ದರು. ಭವಿಷ್ಯದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯಲು ಹಣಕಾಸಿನ ಅಗತ್ಯವಿದೆ ಎಂದು ಹೇಳಿ 2020ರಲ್ಲಿ 5.50 ಲಕ್ಷ ರೂ. ಹಣವನ್ನೂ ಪಡೆದುಕೊಂಡಿದ್ದರು. ಓದುವ ನೆಪದಲ್ಲಿ ಹತ್ತಿರವಾಗಿ ಯುವತಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದೇ ಫೋಟೋಗಳನ್ನಿಡಿದು ಪ್ರೀತಿಸುವಂತೆ ಸಂಜಯ್ ಕುಮಾರ್ ದುಂಬಾಲು ಬಿದ್ದಿದ್ದರು ಎಂದು ದೂರು ದಾಖಲಾಗಿತ್ತು.
''ಈತನ ಪ್ರೀತಿಯನ್ನು ನಿರಾಕರಿಸಿದರೂ ಚಾಕುವಿನಿಂದ ಕೈ ಕೊಯ್ದುಕೊಳ್ಳುವುದಾಗಿ ಬೆದರಿಸಿ ನನ್ನನ್ನು ಕರೆಸಿಕೊಳ್ಳುತ್ತಿದ್ದರು. ಮದ್ಯಪಾನ, ಆನ್‌ಲೈನ್ ಬೆಟ್ಟಿಂಗ್ ಚಟ ಹೊಂದಿರುವುದು ಗಮನಕ್ಕೆ ಬಂದು ನಾನು ಸುಮ್ಮನಿದ್ದೆ. ಸಂಜಯ್ ಬಳಿ ಮಾತನಾಡದೇ ಇದ್ದಾಗ ಅವರು ನನ್ನ ಕರ್ತವ್ಯದ ಸ್ಥಳದಲ್ಲಿ ಸಿಬ್ಬಂದಿಗೆ ಕರೆಮಾಡುತ್ತಿದ್ದರು. ನನ್ನ ಬ್ಯಾಚ್‌ನವರಿಗೆ ಕರೆಮಾಡಿ ನನ್ನ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ನನ್ನ ಮನೆಯ ಸುತ್ತ ಚಾಕು ಹಿಡಿದು ತಿರುಗಾಡಿ ಜೀವ ಬೆದರಿಕೆ ಹಾಕಿದ್ದಾರೆ. ಕೆಲಸದ ಸ್ಥಳಕ್ಕೆ ಬಂದು ಥಳಿಸಿ ನನಗೆ ತೊಂದರೆ ಕೊಟ್ಟಿದ್ದಾರೆ. ನನ್ನ ಖಾಕಿ ಗೌರವ ಮತ್ತು ನನ್ನ ಘನತೆಗೆ ಚ್ಯುತಿ ತಂದಿದ್ದಾರೆ. ನೀವು ನನ್ನನ್ನು ತಿರಸ್ಕರಿಸಿದರೆ ಅಪಹರಿಸಿಕೊಂಡು ಹೋಗಿ ತಾಳಿ ಕಟ್ಟುವುದಾಗಿ ಹೇಳಿ ಬೆದರಿಕೆ ಒಡ್ಡಿದ್ದಾರೆ. ಮಾ.11ರಂದು ಸಂಜಯ್ ನನ್ನ ಮನೆಗೆ ನುಗ್ಗಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ'' ಎಂದು ಎಫ್‌ಐಆರ್‌ನಲ್ಲಿ ಮಹಿಳಾ ಪಿಎಸ್‌ಐ ಆರೋಪಿಸಿದ್ದಾರೆ.
ಚಂದ್ರಾ ಲೇಔಟ್ ಠಾಣೆ ಪೊಲೀಸರು ಈ ಕುರಿತು ತನಿಖೆ ನಡೆಸಿ ಸಂಜಯ್ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಚಾಮರಾಜನಗರ: ಇಎಲ್ ಹಣವನ್ನು ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ-ಬಿಇಓ, ಸಿಆರ್ಪಿ ಅರೆಸ್ಟ್