ಬೆಂಗಳೂರು:ದೆಹಲಿ ಚಲೋ ರೈತ ಹೋರಾಟ ತೀವ್ರಗೊಳ್ಳುತ್ತಿದೆ. ರಾಷ್ಟ್ರೀಯ ರೈತ ಮುಖಂಡ ಜಗಜೀತ್ ಸಿಂಗ್ ದಲೈವಲ ಅವರ ಉಪವಾಸ 14ನೇ ದಿನಕ್ಕೆ ಮುಂದುವರೆದಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲಿಯೂ ಸಂಸತ್ನಲ್ಲಿ ಚರ್ಚಿಸದೆ ನಿದ್ರೆ ಮಾಡುತ್ತಿರುವಂತೆ ನಾಟಕ ಮಾಡುತ್ತಿರುವ ಸಂಸದರುಗಳನ್ನು ಎಚ್ಚರಿಸಬೇಕಾಗಿರುವುದರಿಂದ ನಾಳೆಯಿಂದ ದಿನಕ್ಕೊಂದು ಜಿಲ್ಲೆಯಲ್ಲಿ ಸಂಸದರ ಕಚೇರಿ ಅಥವಾ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚಳುವಳಿ ತೀವ್ರಗೊಳಿಸಲು ಬೆಂಗಳೂರಿನ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ತೀರ್ಮಾನಿಸಲಾಗಿದೆ. ನಾಲ್ಕನೇ ದಿನಕ್ಕೆ ಸರದಿ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸಿ ಹೋರಾಟದ ಸ್ವರೂಪ ಬದಲಾವಣೆ ಮಾಡಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ದೆಹಲಿ ರೈತ ಹೋರಾಟ ಬೆಂಬಲಿಸಲು ಕರ್ನಾಟಕದ ರೈತರ ತಂಡ ಕೂಡ ದೆಹಲಿಗೆ ಹೋಗಲಿದೆ ಎಂದರು.
ದೇಶದ ರೈತರ ಗಂಭೀರ ಸಮಸ್ಯೆಗಳ ಬಗ್ಗೆ ಪ್ರಸ್ತುತ ಸಂಸತ್ ಅಧಿವೇಶದಲ್ಲಿ ಚರ್ಚಿಸಬೇಕು. ರೈತರ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಯಾವ ಸಂಸದರು ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಕೇಂದ್ರ ಸರ್ಕಾರ ಗಂಭೀರವಾಗಿ ಪ್ರತಿಕ್ರಿಯೆ ನೀಡದೆ ಮಾತುಕತೆಗೂ ಆಹ್ವಾನಿಸದೆ ನಿರ್ಲಕ್ಷತನ ತೋರುತ್ತಿದೆ ಎಂದಿದ್ದಾರೆ.