ಧಾರವಾಡ:ಹಿಂದೂಪರ ಕಾರ್ಯಕರ್ತನ ಮೇಲೆ ಹಲ್ಲೆ ಖಂಡಿಸಿ ಇಲ್ಲಿನ ಉಪನಗರ ಪೊಲೀಸ್ ಠಾಣೆ ಮುಭಾಗದಲ್ಲಿ ಶುಕ್ರವಾರ ಸಂಜೆ ಭಾರಿ ಪ್ರತಿಭಟನೆ ನಡೆಸಲಾಯಿತು. ಗೋ ರಕ್ಷಣೆ ಮಾಡಲು ಹೋದಾಗ ಸಂಘಟನೆ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರು, ಹಲ್ಲೆ ನಡೆಸಿದವರ ವಿರುದ್ಧ ಆಕ್ರೋಶ ಹೊರಹಾಕಿದರು.
ಹಿಂದೂಪರ ಸಂಘಟನೆಯ ಸೋಮಶೇಖರ ಚೆನ್ನಶೆಟ್ಟಿ ಹಲ್ಲೆಗೊಳಗಾದ ಯುವಕ. ಧಾರವಾಡ ನಗರದ ಹಳೆ ಎಪಿಎಂಸಿ ಬಳಿ ಗೋ ರಕ್ಷಣೆ ಮಾಡಲು ಹೋದಾಗ ಘಟನೆ ನಡೆದಿದೆ. ಸೋಮಶೇಖರ ಉರಗ ಹಾಗೂ ಪ್ರಾಣಿ ರಕ್ಷಕರಾಗಿದ್ದಾರೆ. ಘಟನೆ ಖಂಡಿಸಿ ಕಾರ್ಯಕರ್ತರು ಠಾಣೆ ಮುಂದೆ ಪ್ರತಿಭಟನೆ ಕುಳಿತು ಧಿಕ್ಕಾರ ಕೂಗಿದರು. ಸ್ಥಳಕ್ಕೆ ವಿಧಾನಸಭೆ ಪ್ರತಿಪಕ್ಷ ಉಪನಾಯಕ, ಶಾಸಕ ಅರವಿಂದ ಬೆಲ್ಲದ್ ಪ್ರತಿಭಟನೆಗೆ ಬೆಂಬಲ ನೀಡಿದರು. ಶಾಸಕರ ಜೊತೆಗೆ ಬಿಜೆಪಿಯ ಕೆಲ ಪಾಲಿಕೆ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರೂ ಭಾಗಿಯಾಗಿದ್ದರು.
ಪ್ರತಿಭಟನೆ ಬಗ್ಗೆ ಶಾಸಕರು ಹೇಳಿದ್ದಿಷ್ಟು:ಈ ಬಗ್ಗೆ ಮಾತನಾಡಿದ ಶಾಸಕರು, ''ಶಾಂತ ಧಾರವಾಡದಲ್ಲಿ ಇವತ್ತು ಇನ್ನೊಂದು ದುರ್ಘಟನೆ ಆಗಿದೆ. ಹಸುಗಳನ್ನು ಕಡಿಯಲು ಕೆಲವರು ಮುಂದಾಗಿದ್ದರು. ಆದರೆ, ವಯಸ್ಸಾದ ಜಾನುವಾರುಗಳನ್ನು ಮಾತ್ರ ವಧೆ ಮಾಡುವ ಅವಕಾಶವಿದೆ. ಸೋಮಶೇಖರ್ ಚೆನ್ನಶೆಟ್ಟಿ ಎಲ್ಲ ಪ್ರಾಣಿ ಹಾಗೂ ಜೀವಿಗಳ ರಕ್ಷಣೆ ಮಾಡುತ್ತ, ಪ್ರಾಣಿ ಪಕ್ಷಿಗಳಿಗೆ ತೊಂದರೆಯಾದರೆ ಚಿಕಿತ್ಸೆ ಕೊಡಿಸುತ್ತಾನೆ. ಕಸಾಯಿಖಾನೆ ನಡೆಸುವ ವ್ಯಕ್ತಿ ಈ ಹಲ್ಲೆ ಮಾಡಿದ್ದಾನೆ. ಅವನ ಜೊತೆಗೆ 50-60 ಜನ ಸೇರಿ ಹಲ್ಲೆ ಮಾಡಿದ್ದಾರೆ. ಕಿವಿ ಕತ್ತರಿಸುವಂತೆ ಹೊಡೆದಿದ್ದು, ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ. ಘಟನೆ ಆಗಿ ಮೂರುವರೆ ಗಂಟೆಯಾದರೂ ಕ್ರಮ ಆಗಿರಲಿಲ್ಲ. ಹೀಗಾಗಿ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ್ದಾರೆ'' ಎಂದರು.