ಕರ್ನಾಟಕ

karnataka

ETV Bharat / state

ರಾಯಚೂರು: ಪಿಡಿಒ ಪರೀಕ್ಷೆ ವೇಳೆ ಪ್ರತಿಭಟನೆ ನಡೆಸಿದ್ದ 12 ಪರೀಕ್ಷಾರ್ಥಿಗಳ ವಿರುದ್ಧ ಪ್ರಕರಣ

ಭಾನುವಾರ ನಡೆದ ಪಿಡಿಒ ಪರೀಕ್ಷೆ ವೇಳೆ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ, ಪರೀಕ್ಷೆ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದರು.

Protest by PDO exam candidates
ಪಿಡಿಒ ಪರೀಕ್ಷಾ ಅಭ್ಯರ್ಥಿಗಳಿಂದ ಪ್ರತಿಭಟನೆ (ETV Bharat)

By ETV Bharat Karnataka Team

Published : 5 hours ago

ರಾಯಚೂರು: ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ವೃಂದ-97 ರ ಪಂಚಾಯತ್​ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪರೀಕ್ಷೆ ವೇಳೆ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ 12 ಪರೀಕ್ಷಾರ್ಥಿಗಳ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಲಾಗಿದೆ.

ಈ ಪರೀಕ್ಷಾರ್ಥಿಗಳು ಜಿಲ್ಲೆಯ ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಪಿಡಿಒ ಹುದ್ದೆ ಪರೀಕ್ಷೆಯಲ್ಲಿ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸುವ ಮೂಲಕ ಪರೀಕ್ಷೆ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದರು.

ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್ ಸಿಂಧನೂರು ಅವರು ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ 12 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಓರ್ವ ಪರೀಕ್ಷಾರ್ಥಿಯನ್ನು ವಶಕ್ಕೆ ಪಡೆದು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಹುತೇಕ ಯಾದಗಿರಿ ಜಿಲ್ಲೆಯ ಪರೀಕ್ಷಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ ಎಂದು ತಪ್ಪು ಭಾವಿಸಿ ಅನಗತ್ಯ ಗೊಂದಲ ಸೃಷ್ಟಿಸಿದ್ದರು. ಪರೀಕ್ಷಾ ಸಂವೀಕ್ಷಕರೊಂದಿಗೆ ವಾಗ್ವಾದ ಮಾಡಿ, ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿ, ಪರೀಕ್ಷೆ ಬರೆಯಲು ಕುಳಿತಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದಂತೆ ಪ್ರಚೋದನೆ ನೀಡಿದ್ದರು. ಇತರ ಪರೀಕ್ಷಾರ್ಥಿಗಳು ಕೊಠಡಿಗಳಿಂದ ಹೊರ ಬರುವಂತೆ ಮಾಡಿ, ರಸ್ತೆಗಿಳಿದು ಪ್ರತಿಭಟಿಸುವಂತೆ ಮಾಡಿದ್ದರು ಎಂದು ದೂರಿನಲ್ಲಿ ‌ಆರೋಪಿಸಲಾಗಿದೆ.

ಕೊಠಡಿ ಸಂಖ್ಯೆ 5ರಲ್ಲಿ ಗೊಂದಲ ಸೃಷ್ಟಿಸಿದ್ದ ಪರೀಕ್ಷಾರ್ಥಿ ಕಾಶಿಪತಿಯನ್ನು ವಶಕ್ಕೆ ಪಡೆದು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್ ಸೇರಿ 12 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಪಿಡಿಒ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಅಭ್ಯರ್ಥಿಗಳಿಂದ ರಸ್ತೆ ತಡೆದು ಪ್ರತಿಭಟನೆ

ABOUT THE AUTHOR

...view details