ಬೆಳಗಾವಿ: "ಸಿಪಿಎಚ್‌ಸಿ, ಯುಎಚ್‌ಸಿ ಮಾರ್ಗಸೂಚಿಗಳ ಅನ್ವಯ 6 ವರ್ಷ ಸೇವೆ ಪೂರೈಸಿದ ಎಲ್ಲ ಸಮುದಾಯ ಆರೋಗ್ಯಾಧಿಕಾರಿಗಳ ಸೇವೆಯನ್ನು ಖಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಫೆ.15ರಿಂದ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್.ಎಚ್.ಎಂ ಗುತ್ತಿಗೆ ನೌಕರರ ಸಂಘದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು" ಎಂದು ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಕೋಳಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಇತರೆ ನೌಕರರಿಗೆ ನೀಡಿದ ಶೇ.15 ವೇತನ ಹೆಚ್ಚಳವನ್ನು ಸಮುದಾಯ ಆರೋಗ್ಯ ಅಧಿಕಾರಿಗಳಿಗೂ ಕೂಡ ಅನ್ವಯಿಸಬೇಕು. ತಡೆ ಹಿಡಿದಿರುವ ಶೇ.5 ರಷ್ಟು ವಾರ್ಷಿಕ ವೇತನ ಮತ್ತು ಶೇ.10 ಲಾಯಲ್ಟಿ ಬೋನಸ್ ಕೂಡಲೇ ಬಿಡುಗಡೆ ಮಾಡಬೇಕು" ಎಂದು ಆಗ್ರಹಿಸಿದರು.
"ಅಲ್ಲದೇ ವಿನಾಕಾರಣ ವಜಾಗೊಳಿಸಿದ ಎಲ್ಲ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕೂಡಲೇ ವಾಪಸ್ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಸಿಪಿಎಚ್‌ಸಿ, ಯುಎಚ್‌ಸಿ ಮಾರ್ಗಸೂಚಿಗಳ ಅನ್ವಯ 15 ಸಾವಿರ ಪ್ರೋತ್ಸಾಹ ಧನ ಪಾವತಿಸಬೇಕು. ಸಮುದಾಯ ಆರೋಗ್ಯ ಅಧಿಕಾರಿಗಳ ಕುಟುಂಬಕ್ಕೆ ಆರೋಗ್ಯ ವಿಮೆ ಹಾಗೂ ಪಿಎಫ್ ಸೌಲಭ್ಯ ನೀಡಬೇಕು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿ ಷರತ್ತು ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಣೆ ಎಚ್‌ಡಬ್ಲ್ಯೂಎಂಸಿಗೆ ನೀಡಬೇಕು ಎಂದು ಧರಣಿಯಲ್ಲಿ ಒತ್ತಾಯಿಸಲಾಗುವುದು" ಎಂದರು.