ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಇಂದು ಬಿಜೆಪಿ ಮತ್ತು ಜೆಡಿಎಸ್ನ ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ಲೇಕಾರ್ಡ್ ಹಿಡಿದು ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಮೂಲಕ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಪಾಲ್ಗೊಳ್ಳುವ ಮೊದಲು ಪ್ರತಿಪಕ್ಷಗಳಾದ ಬಿಜೆಪಿ ಹಾಗು ಜೆಡಿಎಸ್ ಸದಸ್ಯರು ಒಟ್ಟಾಗಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದಾರೆ. ತಹಶಿಲ್ದಾರ್ 50 ಲಕ್ಷದಿಂದ 1 ಕೋಟಿ., ಅಸಿಸ್ಟೆಂಟ್ ಕಮೀಷನರ್ 5-7 ಕೋಟಿ, ಗೃಹ ಇಲಾಖೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್-50 ಲಕ್ಷದಿಂದ 1 ಕೋಟಿ, ಎಸಿಪಿ- 1.5-2 ಕೋಟಿ ಎಂದು ಪ್ಲೇಕಾರ್ಡ್ ಹಿಡಿದು ಪ್ರತಿಭಟಿಸಿ ವಿವಿಧ ಹುದ್ದೆಗಳು ಮಾರಾಟಕ್ಕಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, "ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಪಾರದರ್ಶಕತೆಯನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದೆ. ರೇಟ್ ಕಾರ್ಡ್ ಕೂಡ ಪ್ರಕಟಿಸಿದೆ. ಪಕ್ಕಾ ಕಾಂಗ್ರೆಸ್ ರೇಟ್ ಕಾರ್ಡ್ ಇದು. ಜಾತಿ ಬಲ ಇದ್ದರೆ 10% ಕಡಿಮೆ ಆಗುತ್ತದೆ, ಎಸ್ಆರ್ ರೇಟ್ ಅಡಿಗೆ ಭೂ ಪರಿವರ್ತನೆಗೆ 27ಲಕ್ಷ ಫಿಕ್ಸ್ ಮಾಡಲಾಗಿದೆ. ಪೊಲೀಸ್ ಇಲಾಖೆಗೆ 50 ಲಕ್ಷದಿಂದ 1 ಕೋಟಿ, ಎಸಿಪಿ 1 ಕೋಟಿಯಿಂದ 3 ಕೋಟಿ, ಇಂಜಿನಿಯರ್ ಹುದ್ದೆ 25 ಲಕ್ಷದಿಂದ 1 ಕೋಟಿ. ಈಗ ಯಾರೂ ಪ್ರಯತ್ನ ಮಾಡಬೇಡಿ ಸೋಲ್ಡ್ ಆಗಿದೆ. ಅಬಕಾರಿ ಇಲಾಖೆ 1 ಕೋಟಿ. ಇದು ಸಿದ್ದರಾಮಯ್ಯ ಅವರ ಪಾರದರ್ಶಕ, ಭ್ರಷ್ಟ ಆಡಳಿತ" ಎಂದು ಆರೋಪಿಸಿದರು.