ಬೆಂಗಳೂರು:ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಬರ್ಬರ ಹತ್ಯೆಯನ್ನು ಬಿಜೆಪಿ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಈ ಕೊಲೆ ಪ್ರಕರಣ ಖಂಡಿಸಿ ನಾಳೆ ರಾಜ್ಯಾದ್ಯಂತ ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸುವುದು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ. ಮಂಜುಳಾ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ''ಈ ಹೇಯ, ಅನಾಗರಿಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಕೊಲೆ ಪಕ್ರರಣವನ್ನು ಖಂಡಿಸಿ ನಾಳೆ (ಏ.23) ಸಂಜೆ 6 ಗಂಟೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಮೋರ್ಚಾ ವತಿಯಿಂದ ಮೊಂಬತ್ತಿ (ಕ್ಯಾಂಡಲ್) ಹಚ್ಚಿ ಪ್ರತಿಭಟನಾ ಸಭೆ ನಡೆಸಲಾಗುವುದು'' ಎಂದು ಸಿ ಮಂಜುಳಾ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನೇ ಹೆಚ್ಚುತ್ತಿವೆ. ಸರಕಾರದ ಮುಖ್ಯಸ್ಥರು ಮತ್ತು ಸಚಿವರು ತನಿಖೆಗೂ ಮೊದಲೇ ಕ್ಷುಲ್ಲಕ ಹೇಳಿಕೆ ಕೊಟ್ಟು ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಮಾಡಿದ್ದು, ಬೆಳಗಾವಿಯಲ್ಲಿ ಮಹಿಳೆಯ ವಿವಸ್ತ್ರ ಪ್ರಕರಣ ನಡೆದಾಗಲೂ ಇವುಗಳ ಕುರಿತು ಸರಕಾರವು ತಪ್ಪು ಮಾಹಿತಿ ನೀಡಿತ್ತು'' ಎಂದು ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
''ಬೆಂಗಳೂರಿನಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ಅವರ ಪತಿಯ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ ಘಟನೆಯೂ ನಡೆದಿದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತರಲ್ಲ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ರಾಜ್ಯ ಸರಕಾರವು ಕೂಡಲೇ ಪೊಲೀಸ್ ಇಲಾಖೆ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಸರಕಾರದ ಸಚಿವರು ತನಿಖೆಯ ದಾರಿ ತಪ್ಪಿಸುವಂತೆ ಹೇಳಿಕೆ ನೀಡಬಾರದು'' ಎಂದು ಆಗ್ರಹಿಸಿದ್ದಾರೆ. ''ಕಾಂಗ್ರೆಸ್ ಸರಕಾರದ ಅತಿಯಾದ ತುಷ್ಟೀಕರಣ ನೀತಿಯಿಂದ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ'' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ನಡ್ಡಾ ಭೇಟಿ: ಸಿಬಿಐ ತನಿಖೆಗೆ ವಹಿಸುವಂತೆ ಸರ್ಕಾರಕ್ಕೆ ಆಗ್ರಹ - JP Nadda