ಬೆಂಗಳೂರು:ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣೆ ಹಾಗೂ ಉನ್ನತೀಕರಣಕ್ಕಾಗಿ ವಿಶ್ವಬ್ಯಾಂಕ್ 2,000 ಕೋಟಿ ರೂ. ಹೂಡಿಕೆ ಮಾಡಲಿದ್ದು, ರಾಜ್ಯ ಸರ್ಕಾರ 1,500 ಕೋಟಿ ರೂ. ಹೂಡಲಿದೆ. ವಿಪತ್ತು ನಿರ್ವಹಣೆಗೆ ವಿಶ್ವಬ್ಯಾಂಕ್ ಹೊಸ ತಂತ್ರಜ್ಞಾನಗಳನ್ನೊಳಗೊಂಡ ಹೊಸ ಯೋಜನೆಯೊಂದನ್ನು ರೂಪಿಸಿದ್ದು, 3,500 ಕೋಟಿ ರೂ.ಗಳ ಈ ಯೋಜನೆಯು 2025ರ ಮಾರ್ಚ್ನಿಂದ ವಿಶ್ವಬ್ಯಾಂಕ್ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪೂರ್ಣ ಪ್ರಮಾಣದಲ್ಲಿ ಚಾಲ್ತಿಗೆ ಬರಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಶ್ವಬ್ಯಾಂಕ್, ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಪ್ರತಿನಿಧಿಗಳ ಜೊತೆ ಗುರುವಾರ ವಿಕಾಸಸೌಧದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ವಿಶ್ವಬ್ಯಾಂಕ್ ಪ್ರತಿನಿಧಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಮ್ಮ ಯೋಜನೆಯ ನೀಲನಕ್ಷೆಯನ್ನು ಪ್ರಸ್ತುತಪಡಿಸಿದರು. ಇದೇ ವೇಳೆ, ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜ್ಯ ಪ್ರತಿವರ್ಷ ಬರ ಅಥವಾ ನೆರೆ ಪರಿಸ್ಥಿತಿಯನ್ನು ಎದುರಿಸುವುದು ಸಾಮಾನ್ಯ ಸಂಗತಿ. ಇಂತಹ ರಾಷ್ಟ್ರೀಯ ವಿಪತ್ತುಗಳನ್ನು ನವೀನ ತಂತ್ರಜ್ಞಾನಗಳ ಮೂಲಕ ಎದುರಿಸುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಕಳೆದ ಮೇ ತಿಂಗಳಲ್ಲಿ ವಿಶ್ವಬ್ಯಾಂಕ್ ಭೂ ಸಮ್ಮೇಳನದಲ್ಲಿ ಸ್ವತಃ ತಾವು ಪಾಲ್ಗೊಂಡಿದ್ದು, ಇಂದು ಫಲ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಮಾರ್ಚ್ 2025ರಿಂದ ಮುಂದಿನ ಏಳು ವರ್ಷಗಳ ಅವಧಿಗೆ ವಿಶ್ವಬ್ಯಾಂಕ್ ರಾಜ್ಯದಲ್ಲಿ ವಿಪತ್ತು ನಿರ್ವಹಣೆಗೆ 2,000 ಕೋಟಿ ರೂ. ಹೂಡಲಿದ್ದು, ಕರ್ನಾಟಕ ಸರ್ಕಾರವೂ 1,500 ಕೋಟಿ ರೂ. ಹೂಡಿಕೆ ಮಾಡಲಿದೆ. ಆದರೆ, ಬರ-ನೆರೆ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕೆಲಸ ಆರಂಭಿಸಿದೆ. ತನ್ನ ಪಾಲಿನ ಹಣವನ್ನು ವಿನಿಯೋಗಿಸಿ ನೀರಿನ ಸಂಸ್ಕರಣೆ ಹಾಗೂ ಕೆರೆಗಳ ಜಾಲ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ ಎಂದರು.
ವಿಶ್ವಬ್ಯಾಂಕ್ ಪ್ರತಿನಿಧಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ''ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಕಳೆದೊಂದು ವರ್ಷಗಳಿಂದ ಶ್ರಮವಹಿಸಿ ಕೆರೆಗಳ ಜಾಲವನ್ನು (Lake Network) ನಿರ್ಮಿಸಲಾಗಿದೆ. ನಗರದಾದ್ಯಂತ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಿದ್ದು, ಇದರ ಮೂಲಕ ಹೆಚ್ಚುವರಿ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಒಂದು ಕೆರೆ ತುಂಬಿದ ಕೂಡಲೇ ಆ ನೀರನ್ನು ಮತ್ತೊಂದು ಕೆರೆಗೆ ಹರಿಸುವ ಆ ಮೂಲಕ ಪ್ರವಾಹ ಸ್ಥಿತಿಯನ್ನು ನಿರ್ವಹಣೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ'' ಎಂದು ಸಚಿವರು ವಿವರಿಸಿದರು.