ಬೆಂಗಳೂರು: ಮುಸ್ಲಿಂ ಮೀಸಲಾತಿ ಕುರಿತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಂಸರಾಜ್ ಗಂಗಾರಾಮ್ ಅಹೀರ್ ಹೇಳಿಕೆ ನ್ಯಾಯಾಂಗ ನಿಂದನೆಯಾಗಿದೆ. ಅಲ್ಲದೇ ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಅವರನ್ನು ಆಯೋಗ ಸ್ಥಾನದಿಂದ ತಕ್ಷಣಕ್ಕೆ ವಜಾ ಮಾಡಬೇಕು ಎಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಆಗ್ರಹಿಸಿದ್ದಾರೆ.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಂಸರಾಜ್ ಗಂಗಾರಾಮ್ ಅಹೀರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸುತ್ತಾ, ಮುಸ್ಲಿಂ ಮತ್ತು ಹಿಂದುಗಳ ವಿಂಗಡಣೆ ಪ್ರಯತ್ನದ ಭಾಗವಾಗಿ ಹೇಳಿಕೆ ಕೊಟ್ಟಿದ್ದಾನೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ರಾಜ್ಯದ ಜಾತಿ ಪಟ್ಟಿ ಬಗ್ಗೆ ಮಾತಾಡುವ ಅಧಿಕಾರ ಇಲ್ಲ. ಈ ಹೇಳಿಕೆ ಮೂಲಕ ಚುನಾವಣೆ ಸಂದರ್ಭದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಇದಾಗಿದೆ. ಆತನ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು. ಆಯೋಗದ ಅಧ್ಯಕ್ಷನಾಗಿ ಆತ ಮುಂದುವರಿಯಬಾರದು ಎನ್ನುವುದು ನಮ್ಮ ಬೇಡಿಕೆ. ಈ ಸಂಬಂಧ ಏನು ಕ್ರಮ ಆಗಲಿದೆ ಅಂತ ನೋಡಿ ನಂತರ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು.
ರಾಜ್ಯದಲ್ಲಿ ಮೊದಲ ಬಾರಿಗೆ 1874ರಲ್ಲಿ ಮೀಸಲಾತಿ ಜಾರಿಗೆ ಬಂದಿತ್ತು. 1876ರಲ್ಲಿ ಜಾತಿ ಜನಗಣತಿ ನಡೆಯಿತು. ಅದರ ಆಧಾರದ ಮೇಲೆ ಮೈಸೂರು ಅರಸರಾಗಿದ್ದ ಒಡೆಯರ್ ಮೀಸಲಾತಿ ಕೊಟ್ಟರು. 1874ರಿಂದಲೇ ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ ಇದೆ. ಮೀಸಲಾತಿ ಬದಲಾವಣೆ ಬಗ್ಗೆ ಈ ಸರ್ಕಾರ ಬದಲಾವಣೆ ಮಾಡಿಲ್ಲ. ದೇವರಾಜ್ ಅರಸು ಸರ್ಕಾರ 1972ರಲ್ಲಿ ಹಾವನೂರು ಆಯೋಗ ಮಾಡಿದೆ. 1975ರಲ್ಲಿ ಆಯೋಗ ವರದಿ ಸಲ್ಲಿಕೆ ಮಾಡಿತು. ದೇವರಾಜ್ ಅರಸು ಅವರು ವರದಿ ಜಾರಿ ಮಾಡಿ ಹಿಂದುಳಿದವರಿಗೆ ಮೀಸಲಾತಿ ಕೊಟ್ಟರು. ಜೊತೆಗೆ ಮುಸ್ಲಿಮರನ್ನು ಹಿಂದುಳಿದ ಜಾತಿ ಅಂತ ಮೀಸಲಾತಿ ಕೊಡಲಾಯಿತು ಎಂದು ವಿವರಿಸಿದರು.