ಕರ್ನಾಟಕ

karnataka

ETV Bharat / state

ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಹೃದಯಾಘಾತದಿಂದ ನಿಧನ; ಸಿಎಂ ಸಂತಾಪ - Mahesh Chandra Guru - MAHESH CHANDRA GURU

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೊ.ಮಹೇಶ್‌ ಚಂದ್ರಗುರು ಶನಿವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಪ್ರೊ.ಮಹೇಶ್ ಚಂದ್ರಗುರು
ಪ್ರೊ.ಮಹೇಶ್ ಚಂದ್ರಗುರು (ETV Bharat)

By ETV Bharat Karnataka Team

Published : Aug 17, 2024, 10:45 PM IST

Updated : Aug 18, 2024, 6:10 AM IST

ಮೈಸೂರು:ಪ್ರಗತಿಪರ ಚಿಂತಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಪಿ. ಮಹೇಶ್ ಚಂದ್ರಗುರು (67) ಹೃದಯಾಘಾತದಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ‌ ಪ್ರೊ. ಮಹೇಶ್ ಚಂದ್ರಗುರು ಅವರನ್ನು ಇತ್ತೀಚೆಗಷ್ಟೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗ್ಯಾಂಗ್ರೀನ್​​ನಿಂದ ಗುಣಮುಖರಾಗಿದ್ದ ಅವರನ್ನು‌ ಎರಡು ವಾರಗಳ ಹಿಂದೆ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಶನಿವಾರ ರಾತ್ರಿ 7:15ಕ್ಕೆ ವಿಜಯನಗರದ ಎರಡನೇ ಹಂತದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಅವರು ನಿಧನರಾದರು. ಇವರಿಗೆ ಪತ್ನಿ ಇದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವರಾದ ಮಹೇಶ್ ಚಂದ್ರಗುರು 80ರ ದಶಕದಲ್ಲಿ ಹೈದರಾಬಾದ್​​ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ಆ ಬಳಿಕ ಬಳಿಕ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವರ್ಗಾವಣೆಗೊಂಡು 2019ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.

ಮಹೇಶ್ ಚಂದ್ರಗುರು ಅವರು ಎಡಪಂಥೀಯ ವಾದವನ್ನು ಪ್ರತಿಪಾದಿಸುತ್ತಿದ್ದರು. ನಾಡಹಬ್ಬ ದಸರಾ ವೇಳೆ ಮಹಿಷ ದಸರಾ ಆಚರಣೆಗೆ ಇವರ ಪಾತ್ರ ಪ್ರಮುಖವಾಗಿತ್ತು. ಮಹೇಶ್ ಚಂದ್ರಗುರು ದಲಿತ ಚಳವಳಿ, ರೈತ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಮೊದಲಾದ ಪ್ರಗತಿಪರ ಚಳವಳಿಗಳಲ್ಲಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಸುಮಾರು 32 ಗ್ರಂಥಗಳನ್ನು ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ರಚಿಸಿದ್ದಾರೆ. ಆ ಮೂಲಕ ಸಮೂಹ ಸಂವಹನ, ಪತ್ರಿಕೋದ್ಯಮ, ಮಹಿಳಾ ಸಾಹಿತ್ಯ, ಬೌದ್ಧ ಸಾಹಿತ್ಯ, ಅಂಬೇಡ್ಕರ್ ಸಾಹಿತ್ಯ ಮೊದಲಾದ ಕ್ಷೇತ್ರಗಳಿಗೆ ಮೌಲಿಕ ಕೊಡುಗೆಗಳನ್ನು ನೀಡಿದ್ದಾರೆ. ಸುಮಾರು 120ಕ್ಕೂ ಹೆಚ್ಚು ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಲೇಖನಗಳು ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಮಾರ್ಗದರ್ಶನದಲ್ಲಿ ಸುಮಾರು 32 ವಿದ್ಯಾರ್ಥಿಗಳು ಪಿಹೆಚ್.ಡಿ ಪದವಿ ಗಳಿಸಿದ್ದಾರೆ.

ಸಿಎಂ ಸಂತಾಪ: 'ನನಗೆ ಆತ್ಮೀಯರಾಗಿದ್ದ ಮೈಸೂರಿನ ಪ್ರಗತಿಪರ ಚಿಂತಕ ಡಾ.ಮಹೇಶ್ ಚಂದ್ರಗುರು ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಮಹೇಶ್ ಚಂದ್ರಗುರು ಅವರು ತರಗತಿಗಳಿಂದ ಹೊರಗೆ ಕೂಡಾ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಬುದ್ದ, ಬಸವ, ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಡಾ.ಮಹೇಶ್ ಚಂದ್ರಗುರು ಎಂದೂ ಮೌನಕ್ಕೆ ಮೊರೆಹೋಗದೆ ಮತ್ತು ಪರಿಣಾಮವನ್ನೂ ಲೆಕ್ಕಿಸದೆ ನೇರವಾಗಿ ಮತ್ತು ನಿಷ್ಠುರವಾಗಿ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದರು. ಅವರ ನಿಧನದಿಂದ ಸಮಾಜ ಒಬ್ಬ ಚಿಂತನಶೀಲ ಮಾರ್ಗದರ್ಶಕನನ್ನು ಕಳೆದುಕೊಂಡಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘ ಸಂತಾಪ: ನೂರಾರು ಪತ್ರಕರ್ತರ ಗುರು, ಪ್ರಗತಿಪರ ಚಿಂತಕ, ಶೋಷಿತರ ಗಟ್ಟಿ ಧ್ವನಿ ಪ್ರೊ.ಮಹೇಶ್‌ ಚಂದ್ರಗುರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿದ್ದ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದರು. ಸಾಮಾಜಿಕ ಹೋರಾಟಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು. ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಿಲ್ಲಾ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಪ್ರಸಿದ್ಧ ನವಕರ್ನಾಟಕ ಪ್ರಕಾಶನದ ಆರ್.ಎಸ್. ರಾಜಾರಾಮ್ ನಿಧನ - MD RS Rajaram

Last Updated : Aug 18, 2024, 6:10 AM IST

ABOUT THE AUTHOR

...view details