ಕಲಬುರಗಿ:ಹೊಸದಾಗಿ ತೆಗೆದುಕೊಂಡ ಎಲೆಕ್ಟ್ರಿಕ್ ಬೈಕ್ ಪದೇ ಪದೆ ಕೈಕೊಟ್ಟಿತೆಂದು ಆಕ್ರೋಶಗೊಂಡ ಗ್ರಾಹಕನೊಬ್ಬ ಬೈಕ್ ಶೋರೂಂಗೆ ಬೆಂಕಿ ಹಚ್ಚಿದ ಘಟನೆ ಕಲಬುರಗಿ ನಗರದಲ್ಲಿ ಮಂಗಳವಾರ ನಡೆದಿದೆ.
ಕೈಕೊಟ್ಟ ಎಲೆಕ್ಟ್ರಿಕ್ ಬೈಕ್: ಶೋರೂಂಗೆ ಬೆಂಕಿ ಇಟ್ಟ ಗ್ರಾಹಕ (ETV Bharat) ಹುಮನಾಬಾದ್ ರಸ್ತೆಯಲ್ಲಿರುವ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಗ್ರಾಹಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ತಾನಾಗಿಯೇ ಪೊಲೀಸ್ ಠಾಣೆಗೆ ತೆರಳಿ ತಪ್ಪು ಒಪ್ಪಿಕೊಂಡಿದ್ದಾನೆ. ಕಲಬುರಗಿ ನಗರದ ನಿವಾಸಿ ಮಹ್ಮದ್ ನದೀಮ್ ಬೆಂಕಿ ಹಚ್ಚಿದ ಗ್ರಾಹಕನಾಗಿದ್ದು, ಚೌಕ್ ಠಾಣೆ ಪೊಲೀಸರು ಈತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಮಹ್ಮದ್ ನದೀಮ್ ಮೂರು ದಿನಗಳ ಹಿಂದಷ್ಟೇ ಹೊಸ ಎಲೆಕ್ಟ್ರಿಕ್ ಬೈಕ್ ತೆಗೆದುಕೊಂಡಿದ್ದ. ಆದರೆ, ಪ್ರಾರಂಭದಿಂದಲೂ ಬೈಕ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಎರಡು ಬಾರಿ ದುರಸ್ತಿ ಮಾಡಿದರೂ ಸರಿಹೋಗಿರಲಿಲ್ಲ. ಹೀಗಾಗಿ ಶೋರೂಂಗೆ ಬಂದಿದ್ದ ವ್ಯಕ್ತಿ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದ. ಬಳಿಕ ಕೋಪಗೊಂಡು ಪೆಟ್ರೋಲ್ ತೆಗೆದುಕೊಂಡು ಬಂದು ಶೋರೂಂನಲ್ಲಿದ್ದ ಬೈಕ್ಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸ್ ಆಯುಕ್ತ ಶರಣಪ್ಪ (ETV Bharat) ಮಂಗಳವಾರ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಚಾಚಿಕೊಂಡಿದ್ದು, ಶೋರೂಂ ಧಗಧಗಿಸಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು. ಶೋರೂಂನಲ್ಲಿದ್ದ ಬೈಕ್ಗಳು ಹಾಗೂ ಸಾಮಗ್ರಿಗಳು ಬೆಂಕಿಗೆ ಆಹುತಿ ಆಗಿದ್ದವು. ಆದರೆ ಶೋರೂಂ ಮಾಲೀಕರು ಇದೊಂದು ಆಕಸ್ಮಿಕ ಘಟನೆ ಎಂದು ಉಹಿಸಿದ್ದರು. ಆದರೆ, ಗ್ರಾಹಕ ಠಾಣೆಗೆ ಹೋಗಿ ಶರಣಾದ ನಂತರ ಯಾರೂ ಉಹಿಸಿಕೊಳ್ಳದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಚಿತ್ತಾಪುರ ಪೊಲೀಸರ ಕಾರ್ಯಾಚರಣೆ - ಅಂತರ್ ರಾಜ್ಯ ಕಳ್ಳನ ಬಂಧನ, ಎರಡು ಬೈಕ್ಗಳು ಜಪ್ತಿ:ಕಲಬುರಗಿ ಜಿಲ್ಲೆಯ ಚಿತ್ತಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರ್ ರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೆಲಂಗಾಣ ರಾಜ್ಯದ ತಾಂಡೂರು ನಿವಾಸಿ ಅಹ್ಮದ್ ಶೇಖ್ (24) ಬಂಧಿತ ಆರೋಪಿ. ಬಂಧಿತನಿಂದ ಚಿತ್ತಾಪುರ ಪಟ್ಟಣದಲ್ಲಿ ಕಳ್ಳತನ ಮಾಡಿದ್ದ ಒಂದು ಬೈಕ್ ಹಾಗೂ ತೆಲಂಗಾಣ ರಾಜ್ಯದಲ್ಲಿ ಕಳ್ಳತನ ಮಾಡಿದ ಒಂದು ಬೈಕ್ ಸೇರಿದಂತೆ ಎರಡು ಬೈಕ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಚಿತ್ತಾಪುರ ಪಟ್ಟಣದಲ್ಲಿ ಬೈಕ್ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅನುಮಾನಾಸ್ಪದವಾಗಿ ಕಂಡ ಅಹ್ಮದ ಶೇಖ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬೈಕ್ ಹಾಗೂ ತಾಂಡೂರು ಬಳಿಯ ಗ್ರಾಮವೊಂದರ ದೇವಸ್ಥಾನದಲ್ಲಿ ಬೆಲೆ ಬಾಳುವ ವಸ್ತು ಕದ್ದಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ವಸತಿ ನಿಲಯದಲ್ಲಿ ಹಠಾತ್ ಬೆಂಕಿ, 17 ವಿದ್ಯಾರ್ಥಿಗಳು ಬೆಂಕಿಗಾಹುತಿ: 13 ಮಂದಿಯ ಸ್ಥಿತಿ ಗಂಭೀರ - FIRE IN SCHOOL 17 DIED