ಬೆಂಗಳೂರು: ವಿಧಾನಸೌಧದಲ್ಲಿ ಮಂಗಳವಾರ ಸಂಜೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸಭೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು.
ರಾಜ್ಯಸಭೆ ಚುನಾವಣೆ ಫಲಿತಾಂಶದ ನಂತರ ನಡೆದ ಸಂಭ್ರಮಾಚರಣೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪದಡಿ ಬಿಜೆಪಿ ಶಾಸಕ ವಿ.ಸುನೀಲ್‍ಕುಮಾರ್ ಮಾತನಾಡುವಾಗ, ಶಾಸಕರ ಮನೆಗೆ ಬೆಂಕಿ ಹಾಕಿದವರನ್ನು ಅಮಾಯಕರು, ಕುಕ್ಕರ್ ಬಾಂಬ್ ಆರೋಪಿಯನ್ನು ಬ್ರದರ್ ಎಂದು ಕರೆದರು ಎಂದಿದ್ದು ಕಾಂಗ್ರೆಸ್ ಶಾಸಕರನ್ನು ಕೆರಳಿಸಿತು.
ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ವಿಷಯದ ಬಗ್ಗೆ ಕಾಳಜಿ ಇದ್ದರೆ ಚರ್ಚೆ ಮಾಡಿ, ರಾಜಕೀಯ ಏಕೆ ಪ್ರಸ್ತಾಪ ಮಾಡುತ್ತೀರಿ ಎಂದರು. ಆಗ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಅವರು ಎಷ್ಟೇ ಪ್ರಚೋದಿಸಿ ಮಾತನಾಡಿದರೂ ಸುಮ್ಮನೇ ಇದ್ದೇವೆ. ವಿಷಯದ ವಾಸ್ತವತೆ ಮೇಲೆ ಬೆಳಕು ಚೆಲ್ಲುತ್ತಿಲ್ಲ. ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಸುಳ್ಳುಗಳ ಕಟ್ಟುಕಥೆ ಕಟ್ಟುತ್ತಿದ್ದಾರೆ. ಸುನಿಲ್‍ಕುಮಾರ್ ಪ್ರಸ್ತಾಪಿಸಿದ ಶಬ್ದವನ್ನು ಕಡತದಿಂದ ತೆಗೆಯಬೇಕು ಎಂದಾಗ ಪರಿಶೀಲಿಸುವ ಭರವಸೆಯನ್ನು ಸಭಾಧ್ಯಕ್ಷರು ನೀಡಿದರು.
ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ಕಡತದಿಂದ ಏಕೆ ತೆಗೆಯಬೇಕೆಂದು ಆಕ್ಷೇಪಿಸಿದರು. ಈ ಹಂತದಲ್ಲಿ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ, ಸಚಿವ ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಮಾತು ಮುಂದುವರೆಸಿದ ಸುನೀಲ್‍ಕುಮಾರ್, ಸರ್ಜಿಕಲ್ ಸ್ಟ್ರೈಕ್ ಆದಾಗ ಸಾಕ್ಷಿ ಕೇಳಿದ್ದು ಯಾವ ಪಕ್ಷ ಎಂದು ಪ್ರಶ್ನಿಸಿದರು. ಆಗಲೂ ಏರಿದ ಧ್ವನಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಕೃಷ್ಣ ಭೈರೇಗೌಡ ಮಾತನಾಡಿ, 40 ಸೈನಿಕರು ಮೃತಪಟ್ಟರು ಯಾರನ್ನಾದರೂ ಬಂಧಿಸಿದ್ದಾರಾ? ಅವರ ಸಾವಿಗೆ ಯಾರು ಕಾರಣ? 5 ವರ್ಷವಾಯಿತು ಯಾವೊಬ್ಬ ಕಾರಣಕರ್ತರನ್ನು ಪತ್ತೆ ಹಚ್ಚಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಸಚಿವ ಶಿವರಾಜ್ ತಂಗಡಗಿ ಧ್ವನಿಗೂಡಿಸಿ ಮಾತನಾಡಿದರು. ಆಗ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಲು ಮುಂದಾದಾಗ ನಾಳೆ ಬೆಳಗಿನವರೆಗೂ ಮಾತನಾಡಲು ಅವಕಾಶ ಕೊಡಲಾಗುವುದು. ಯಾರ್ಯಾರು ಮಾತನಾಡಬೇಕೆನ್ನುತ್ತೀರೋ ಅವರ ಪಟ್ಟಿ ಕೊಡಿ ಎಂದು ಸಭಾಧ್ಯಕ್ಷರು ಕೇಳಿದರು.
ಈ ವೇಳೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಘೋಷಣೆ ಕೂಗಿದ ವ್ಯಕ್ತಿಯನ್ನು ರಾಜಾಜಿನಗರದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅವರ ಬಾಯಿ ಮುಚ್ಚಿಸಿದ್ದಾರೆ. ಆ ರೀತಿ ಘೋಷಣೆ ಕೂಗದೇ ಇದ್ದರೆ ಏಕೆ ಬಾಯಿ ಮುಚ್ಚಿಸಬೇಕಿತ್ತು ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಸುನೀಲ್ ಕುಮಾರ್, ರಾಜ್ಯಸಭೆ ಚುನಾವಣಾ ಫಲಿತಾಂಶದ ನಂತರ ನಡೆದ ಸಂಭ್ರಮಾಚರಣೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಆಗ್ರಹಿಸಿದರು.