ಬೆಳಗಾವಿ:ಜಾರಕಿಹೊಳಿ ಕುಟುಂಬದ ಮೊದಲ ಕುಡಿ ಸಂಸತ್ತಿಗೆ ಪ್ರವೇಶಿಸಿದ ಹೆಗ್ಗಳಿಕೆಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಪಾತ್ರರಾಗಿದ್ದಾರೆ. ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೂ ಬೆಳಗಾವಿ ಗೆಲುವಿನಿಂದ ರಾಜಕೀಯ ಪುನರ್ಜನ್ಮ ಸಿಕ್ಕಂತಾಗಿದೆ.
ಪ್ರಿಯಾಂಕಾ ಜಾರಕಿಹೊಳಿ (Photo: ETV Bharat) ಹೌದು, ಐವರು ಜಾರಕಿಹೊಳಿ ಸಹೋದರರ ಪೈಕಿ ಯಾರೂ ಕೂಡ ಲೋಕಸಭೆಗೆ ಆಯ್ಕೆಯಾಗಿಲ್ಲ. 2021ರಲ್ಲಿ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಶಾಸಕರಾಗಿದ್ದರೆ, ಲಖನ್ ಜಾರಕಿಹೊಳಿ ವಿಧಾನಪರಿಷತ್ ಸದಸ್ಯರಿದ್ದಾರೆ. ಭೀಮಶಿ ಜಾರಕಿಹೊಳಿಗೆ ರಾಜಕೀಯ ಸ್ಥಾನಮಾನ ಲಭಿಸಿಲ್ಲ.
ಇದೇ ಮೊದಲ ಬಾರಿ ಚಿಕ್ಕೋಡಿ ಲೋಕಸಭೆಗೆ ಸ್ಪರ್ಧಿಸಿದ್ದ ಪ್ರಿಯಾಂಕಾ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದರಾಗಿದ್ದ ಅಣ್ಣಾಸಾಹೇಬ ಜೊಲ್ಲೆ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಅಲ್ಲದೇ, ಚಿಕ್ಕ ವಯಸ್ಸಿನಲ್ಲಿಯೇ ಜಾರಕಿಹೊಳಿ ಕುಟುಂಬದ ಮೊದಲ ಕುಡಿಯೊಂದು ಸಂಸತ್ ಪ್ರವೇಶಿಸಿದಂತಾಗಿದೆ.
ಜಗದೀಶ ಶೆಟ್ಟರ್ (Photo: ETV Bharat) ಶೆಟ್ಟರ್ ಗೆಲುವಿನ ನಗೆ:ಹುಬ್ಬಳ್ಳಿಯಿಂದ ಬೆಳಗಾವಿ ಕಡೆ ವಲಸೆ ಬಂದಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆಲುವಿನ ನಗೆ ಬೀರಿದ್ದಾರೆ. ಬೀಗರ ಕ್ಷೇತ್ರದಲ್ಲಿ ಗೆದ್ದು ಮತ್ತೆ ಬೆಳಗಾವಿ ಬಿಜೆಪಿ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದ ಶೆಟ್ಟರ್ ಅತಂತ್ರವಾಗಿದ್ದರು. ಈ ಗೆಲುವು ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದೆ.
ಶೆಟ್ಟರ್ ಗೆಲ್ಲಿಸಲು ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಹೊಣೆ ಹೊತ್ತಿದ್ದರು. ಗೋಕಾಕ್ನಲ್ಲಿ ಬಿಜೆಪಿಗೆ 23,897, ಅರಭಾವಿಯಲ್ಲಿ 21,475 ಮತಗಳ ಲೀಡ್ ಸಿಕ್ಕಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲೂ ಶಾಸಕ ಅಭಯ್ ಪಾಟೀಲ 73,220 ಮತಗಳ ಭಾರಿ ಅಂತರದ ಲೀಡ್ ಸಿಗಲು ಶ್ರಮಿಸಿದ್ದಾರೆ. ಅಲ್ಲದೇ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಾ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಬರುವಲ್ಲಿಯೂ ರಮೇಶ ಜಾರಕಿಹೊಳಿ ಪ್ಲಾನ್ ವರ್ಕೌಟ್ ಆಗಿದೆ ಎನ್ನಲಾಗಿದೆ. ಗ್ರಾಮೀಣದಲ್ಲಿ ಮೃಣಾಲ್ಗೆ 50,529 ಮತಗಳು ಹಿನ್ನಡೆಯಾಗಿ ಪರಿಣಮಿಸಿದೆ.
ಆದರೆ, ಚಿಕ್ಕೋಡಿಯಲ್ಲಿ ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿ ತಮ್ಮದೇ ಪಕ್ಷದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಹೆಚ್ಚಿನ ಪ್ರಚಾರ ನಡೆಸದೆ, ತಮ್ಮ ಸಹೋದರನ ಮಗಳಿಗೆ ಬೆಂಬಲಿಸಿದಂತಿತ್ತು. ಪ್ರಿಯಾಂಕಾ ಗೆಲುವಿನಲ್ಲಿ ಈ ಇಬ್ಬರ ಪಾತ್ರವೂ ಪ್ರಮುಖವಾಗಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬಂದಿವೆ.
ಹೆಬ್ಬಾಳ್ಕರ್ಗೆ ಆಘಾತ ನೀಡಿದ ಬ್ರದರ್ಸ್:ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರು. ಆದರೆ, ಈ ಹಿಂದಿನಿಂದಲೂ ಅವರಿಗೆ ಪ್ರಬಲ ರಾಜಕೀಯ ವಿರೋಧಿಗಳಾದ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಜಗದೀಶ ಶೆಟ್ಟರ್ ಅವರನ್ನು ಭಾರಿ ಅಂತರದಿಂದ ಗೆಲ್ಲಿಸುವ ಮೂಲಕ ಹೆಬ್ಬಾಳ್ಕರ್ ಪ್ರಭಾವ ಕುಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ, ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾರನ್ನೂ ಗೆಲ್ಲಿಸಿ, ತಮ್ಮ ಕುಟುಂಬದ ಪ್ರತಿಷ್ಠೆ ಉಳಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಎರಡು ಸಲ ಶಾಸಕಿಯಾಗಿ, ಇದೇ ಮೊದಲ ಬಾರಿ ಸಚಿವೆಯೂ ಆಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿದ್ದರು. ಸಹೋದರ ಚನ್ನರಾಜ ಹಟ್ಟಿಹೊಳಿಯನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಈ ಬಾರಿ ಪುತ್ರ ಮೃಣಾಲ್ ಗೆಲ್ಲಿಸಿ ಲೋಕಸಭೆಗೆ ಕಳಿಸುವ ವಿಶ್ವಾಸದಲ್ಲಿದ್ದರು. ಆದರೆ, ಈ ಆಸೆಗೆ ಮತದಾರರು ಮಣೆ ಹಾಕಿಲ್ಲ.
ಇದನ್ನೂ ಓದಿ:ಶಾಸಕ ಸವದಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ : ಸಚಿವ ಸತೀಶ್ ಜಾರಕಿಹೊಳಿ - satish jarakiholi statement