ಮಂಗಳೂರು:ಪ್ರಧಾನಿ ಮೋದಿ ಮಂಗಳೂರಿನಲ್ಲಿ ರೋಡ್ ಶೋ ನಡೆಸಿ ಲೋಕಸಭಾ ಚುನಾವಣೆಗೆ ರಂಗು ತಂದಿದ್ದಾರೆ. ಮಂಗಳೂರಿನಲ್ಲಿ ರೋಡ್ ಶೋ ಆಯೋಜಿಸುವ ಮೂಲಕ ಬಿಜೆಪಿ ಚುನಾವಣಾ ಪ್ರಚಾರ ನಡೆಸಿದ ಮೋದಿ ಬಿಜೆಪಿ ಕಾರ್ಯಕರ್ತರಲ್ಲಿ ನವೊಲ್ಲಾಸ ತುಂಬಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಇದು ಬರುತ್ತಿರುವುದು ಹೊಸತೇನಲ್ಲ. ಪ್ರತೀ ಚುನಾವಣೆಯ ಸಂದರ್ಭದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿಯನ್ನು ತಪ್ಪಿಸಿಕೊಳ್ಳುವುದೇ ಇಲ್ಲ. ಈವರೆಗೆ ಅವರು ಮಂಗಳೂರಿಗೆ ಹತ್ತು ಬಾರಿ ಭೇಟಿ ಕೊಟ್ಟಿದ್ದಾರೆ.
ಯಾವಾಗೆಲ್ಲ ಮೋದಿ ಭೇಟಿ:'2013ರಲ್ಲಿ ಗುಜರಾತ್ ಸಿಎಂ ಆಗಿದ್ದ ಮೋದಿಯವರು ಆಗ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ್ದರು. 2014ರಲ್ಲಿ ಲೋಕಸಭಾ ಚುನಾವಣ ಪ್ರಚಾರಕ್ಕೂ ಮೋದಿ ಆಗಮಿಸಿ, ಸಮಾವೇಶದಲ್ಲಿ ಮಾತನಾಡಿದ್ದರು. ಪ್ರಧಾನಿಯಾದ ಬಳಿಕ 2016ರಲ್ಲಿ ಕೇರಳದ ಕೊಚ್ಚಿಗೆ ತೆರಳುವ ಹಾದಿಯಲ್ಲಿ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾರ್ಯಕರ್ತರನ್ನು ಭೇಟಿಯಾಗಿದ್ದರು. 2017ರಲ್ಲಿ ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದರು. ಆಗ ಕೂಡ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ತೆರಳಿದ್ದರು. 2017ರಲ್ಲಿ ಮೋದಿ ಲಕ್ಷದ್ವೀಪಕ್ಕೆ ಹೋಗುವುದಕ್ಕಾಗಿ ಒಂದು ರಾತ್ರಿ ಮಂಗಳೂರಿನಲ್ಲಿ ಉಳಿದುಕೊಂಡಿದ್ದರು. ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ವೇಳೆಗೆ ಮಧ್ಯರಾತ್ರಿ ಆಗಿತ್ತು'.
'2018ರ ಅಸೆಂಬ್ಲಿ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದ ಮೋದಿ ನೆಹರು ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು. 2019ರಲ್ಲಿ ಚುನಾವಣ ಪ್ರಚಾರ ಸಮಾವೇಶಕ್ಕೆ ಬಂದಿದ್ದ ಮೋದಿ, ನೆಹರು ಮೈದಾನದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಹಂಪನಕಟ್ಟೆ ಬಳಿ ಭರ್ಜರಿ ಜನರು ಸೇರಿದ್ದರು. ಜನರ ಉತ್ಸಾಹ ನೋಡಿ ಮೋದಿ ಕಾರಿನ ಬಾಗಿಲು ತೆರೆದು ಜನರ ಕೈ ಕುಲುಕಿದ್ದರು. 2022ರಲ್ಲಿ ವಿವಿಧ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆಗೆಂದು ಮಂಗಳೂರಿಗೆ ಆಗಮಿಸಿದ್ದರು. 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಾಗಿ ಮೂಲ್ಕಿಗೆ ಆಗಮಿಸಿದ್ದರು. 2024ರ ಲೋಕಸಭಾ ಚುನಾವಣೆ ಪ್ರಚಾರಾರ್ಥ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ'.
ಪ್ರಧಾನಿ ಮೋದಿ ಚುನಾವಣೆಯ ಪ್ರತೀ ಸಂದರ್ಭದಲ್ಲಿ ತಪ್ಪದೇ ಮಂಗಳೂರಿಗೆ ಭೇಟಿ ನೀಡಿದ್ದಾರೆ. 2013, 2018, 2023 ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ, 2014, 2019, 2024 ರ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ್ದಾರೆ. ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅವರು ಮಂಗಳೂರು ಭೇಟಿಯನ್ನು ಈವರೆಗೆ ತಪ್ಪಿಸಿಕೊಂಡಿಲ್ಲ. ಸಾಧಾರಣಾವಾಗಿ ಚುನಾವಣೆಯ ಸಂದರ್ಭದಲ್ಲಿ ದುರ್ಬಲವಾಗಿರುವ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಅಲ್ಲಿನ ಮತಗಳನ್ನು ಹೆಚ್ಚಿಸುವ ತಂತ್ರಗಾರಿಕೆಯಿಂದ ಮೋದಿಯಂತಹ ನಾಯಕರನ್ನು ಬಳಸುತ್ತಾರೆ. ಆದರೆ, ಮಂಗಳೂರಿನಲ್ಲಿ ಬಿಜೆಪಿ ಪ್ರಬಲವಾಗಿದೆ. ಕಳೆದ 33 ವರ್ಷಗಳ ಕಾಲ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿಗೆ ಗೆಲುವನ್ನು ತಂದಿದ್ದರೂ ಮೋದಿ ಅವರು ಮಂಗಳೂರಿನಲ್ಲಿ ಪ್ರಚಾರ ಮಾಡಿದ್ದು ವಿಶೇಷ.
ಮನ್ ಕಿ ಬಾತ್ನಲ್ಲಿಯೂ ಪ್ರಸ್ತಾಪ: 2019ರ ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶಕ್ಕೆ ಆಗಮಿಸಿ ತೆರಳುವ ವೇಳೆ ಪ್ರಧಾನಿ ಅವರನ್ನು ನೋಡಲು ನಗರದ ಹಂಪನಕಟ್ಟೆಯಿಂದ ಮಂಗಳೂರು ವಿಮಾನ ನಿಲ್ದಾಣದವರೆಗೆ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರು. ಸಮಾವೇಶ ಮುಗಿದ ಬಳಿಕ ಅನಧಿಕೃತ ರೋಡ್ ಶೋ ನಡೆದಿತ್ತು. ಇದನ್ನು ಮುಂದಿನ ಮನ್ ಕಿ ಬಾತ್ನಲ್ಲಿ ಮೋದಿ ಪ್ರಸ್ತಾಪಿಸಿ ಮಂಗಳೂರಿನಲ್ಲಿ ಮಾನವ ಗೋಡೆಯನ್ನು ನಿರ್ಮಿಸಲಾಗಿತ್ತು ಎಂದು ಪ್ರಶಂಸಿದ್ದರು. ಆ ಬಳಿಕ ರೋಡ್ ಶೋ ಎಂಬ ಕಾನ್ಸೆಪ್ಟ್ ಎಲ್ಲಾ ಕಡೆ ಆರಂಭವಾಯಿತು ಎಂದು ಬಿಜೆಪಿ ನಾಯಕರು ಹೇಳುತ್ತಾರೆ.