ಬೆಂಗಳೂರು :ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಣ ಇಲಾಖೆ ವಿರುದ್ಧ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆಗಸ್ಟ್ 12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ರಾಜ್ಯದ ವಿವಿಧೆಡೆಯಿಂದ ಶಾಲಾ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
2017ರ ವೃಂದ ಮತ್ತು ನೇಮಕಾತಿ ನಿಯಮಗಳು ಅದಕ್ಕಿಂತಲೂ ಮುಂಚೆ ನೇಮಕಾತಿಗೊಂಡಿರುವ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಕಾರ್ಯಾದೇಶ ಹೊರಡಿಸಿದೆ. ಅಲ್ಲದೆ ಮೂಲತಃ 1 ರಿಂದ 7 ಹಾಗೂ 8 ಕ್ಕೆ ನೇಮಕ ಹೊಂದಿದ ಶಿಕ್ಷಕರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ 1 ರಿಂದ 5 ಕ್ಕೆ ಹಿಂಬಡ್ತಿ ನೀಡಿದೆ. ಸರ್ಕಾರದ ಈ ಆದೇಶದಿಂದ ಸುಮಾರು 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ.
ಹಾಗಾಗಿ ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು. 2016 ಕ್ಕಿಂತ ಮುಂಚೆ ನೇಮಕ ಹೊಂದಿದ ಶಿಕ್ಷಕರನ್ನು ಎನ್‌ಸಿಟಿ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆ ಹೊಂದಿದ ಎಲ್ಲ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾ ಜೇಷ್ಠತೆಯೊಂದಿಗೆ ಪುನರ್ ಪದನಾಮಕರಣ ಮಾಡಬೇಕು ಎಂಬುದು ಶಿಕ್ಷಕರು ಮುಂದಿಟ್ಟಿರುವ ಬೇಡಿಕೆಯಾಗಿದೆ.