ಬೆಂಗಳೂರು :ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷದವರು ವಿವಿಧ ಮಾಧ್ಯಮಗಳಲ್ಲಿ ಬಿತ್ತರಿಸುವ ಜಾಹಿರಾತುಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಎಂಸಿಎಂಸಿ ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಸೂಚನೆ ನೀಡಿದರು.
ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿ ಸಭೆ ನಡೆಸಿ ಮಾತನಾಡಿ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ವಿವಿಧ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಮತ್ತು ಅಭ್ಯರ್ಥಿಗಳ ಪರ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಧ್ವನಿ/ದೃಶ್ಯ(ಆಡಿಯೋ/ವೀಡಿಯೋ) ಜಾಹೀರಾತುಗಳನ್ನು ಪ್ರಕಟಿಸುವ ಮೊದಲು ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿಯ ಪೂರ್ವ ಪ್ರಮಾಣೀಕರಣ ಹೊಂದಿರಬೇಕು ಎಂದರು.
ಯಾವುದೇ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷ, ಅಭ್ಯರ್ಥಿಯು ಜಾಹೀರಾತು ಪ್ರಸಾರವಾಗುವ 3 ದಿನಗಳ ಮುನ್ನ ಹಾಗೂ ನೋಂದಾಯಿತ, ಮಾನ್ಯವಲ್ಲದ ರಾಜಕೀಯ ಪಕ್ಷ ಜಾಹೀರಾತಿಗೆ ಪೂರ್ವ ಪ್ರಮಾಣೀಕರಣ ಅರ್ಜಿಯನ್ನು 7 ದಿನಗಳ ಮುಂಚಿತವಾಗಿ ಸಲ್ಲಿಸಬೇಕು ಎಂದು ಪ್ರೀತಿ ಗೆಹ್ಲೋಟ್ ಸೂಚನೆ ನೀಡಿದರು.
ರಾಜಕೀಯ ಪಕ್ಷಗಳು ಜಾಹೀರಾತು ಪೂರ್ವ ಪ್ರಮಾಣೀಕರಣಕ್ಕಾಗಿ ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೇ, ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಸೇರಿದಂತೆ 3 ಲೋಕಸಭಾ ಕ್ಷೇತ್ರಗಳಲ್ಲಿ ವಿಂಗಡಿಸಿ ಆಯಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅಭ್ಯರ್ಥಿ ಅಥವಾ ಪಕ್ಷ ನಿಗದಿತ ಚುನಾವಣಾಧಿಕಾರಿಗೆ ಜಾಹೀರಾತು ಪೂರ್ವ ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರೀತಿ ಗೆಹ್ಲೋಟ್ ತಿಳಿಸಿದರು.
ಯಾವುದೇ ಧ್ವನಿ/ದೃಶ್ಯ ಮಾಧ್ಯಮದ ರಾಜಕೀಯ ಜಾಹೀರಾತು, ಪ್ರಚಾರ ವಿಷಯದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಅಂಶಗಳನ್ನು ಇರಬಾರದು. ಉಲ್ಲಂಘನೆಯಾದ ಸಂದರ್ಭದಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿಗಳು ಅಂತಹ ಅಭ್ಯರ್ಥಿಗೆ ವಿವರಣೆ ಕೇಳುವ ನೋಟಿಸ್ ಜಾರಿ ಮಾಡುತ್ತಾರೆ. ಜಿಲ್ಲಾ ಮಾಧ್ಯಮ ಮೇಲುಸ್ತುವಾರಿ ತಂಡಗಳು ನಿರಂತರ ಎಲ್ಲ ರೀತಿಯ ಮಾಧ್ಯಮ ಪ್ರಸಾರದ ಮೇಲೆ ನಿಗಾ ವಹಿಸುತ್ತಿದ್ದು, ಸಂಶಯಾಸ್ಪದ ಪಾವತಿ ಸುದ್ದಿ ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು. ಮಾದರಿ ನೀತಿ ಸಂಹಿತೆ ಅನ್ವಯ ಪ್ರಚಾರ ಕಾರ್ಯಗಳನ್ನು ನಡೆಸುವ ಮೂಲಕ ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆಸಲು ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಪ್ರೀತಿ ಗೆಹ್ಲೋಟ್ ಮನವಿ ಮಾಡಿದರು.
ಈ ಸಭೆಯಲ್ಲಿ ಜಿಲ್ಲಾ ಎಂಸಿಎಂಸಿ ಸದಸ್ಯ ಕಾರ್ಯದರ್ಶಿ ಸಿ ರೂಪಾ, ಎಂಸಿಎಂಸಿ ಸದಸ್ಯರುಗಳಾದ ಆನಂದ್, ವಿಜಯ್ ಕುರ್ಮಾ ಹರಿದಾಸ್, ಎಲ್ ಸುರೇಶ್, ರಾಜಕೀಯ ಪ್ರತಿನಿಧಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.