ಚಿತ್ರದುರ್ಗ: ಇಲ್ಲಿನ ಭರಮಸಾಗರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬನಿಗೆ ಆಪರೇಷನ್ ಮಾಡುವಂತೆ ಪ್ರಿ ವೆಡ್ಡಿಂಗ್ ಶೂಟ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಜೋಡಿಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಇದೀಗ ನಿಯಮಬಾಹಿರ ನಡೆ ಹಾಗೂ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಗುತ್ತಿಗೆ ಆಧಾರಿತ ವೈದ್ಯ ಡಾ.ಅಭಿಷೇಕ್ ಅವರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಘಟನೆ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, "ಚಿತ್ರದುರ್ಗದ ಭರಮಸಾಗರ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಪ್ರಿ ವೆಡ್ಡಿಂಗ್ ಶೋಟ್ ನಡೆಸಿದ ವೈದ್ಯರನ್ನ ಸೇವೆಯಿಂದ ವಜಾಗೊಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಿರುವುದು ಜನರ ಆರೋಗ್ಯ ಸೇವೆಗೆ ಹೊರತು ವೈಯಕ್ತಿಕ ಕೆಲಸಗಳಿಗಲ್ಲ. ವೈದ್ಯರಿಂದ ಇಂಥಹ ಅಶಿಸ್ತುಗಳನ್ನ ನಾನು ಸಹಿಸುವುದಿಲ್ಲ. ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಗುತ್ತಿಗೆ ನೌಕರರು ಸೇರಿದಂತೆ ವೈದ್ಯರು, ಸಿಬ್ಬಂದಿ ವರ್ಗದವರು ಸರ್ಕಾರಿ ಸೇವಾ ನಿಯಮಾವಳಿಗಳ ಅನ್ವಯ ಕರ್ತವ್ಯ ನಿರ್ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ದುರುಪಯೋಗಳು ಆಗದಂತೆ ಎಚ್ಚರಿಕೆ ವಹಿಸಲು ಸಂಬಂಧಪಟ್ಟ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಒದಗಿಸಿರುವ ಸೌಕರ್ಯಗಳು ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಎಂಬುದನ್ನ ಅರಿತು ಕರ್ತವ್ಯ ನಿರ್ವಹಿಸುವತ್ತಾ ಎಲ್ಲರೂ ಗಮನಹರಿಸಬೇಕು" ಎಂದು ತಿಳಿಸಿದ್ದಾರೆ.