ಚಾಮರಾಜನಗರ:ವಿ. ಶ್ರೀನಿವಾಸಪ್ರಸಾದ್ ಒಟ್ಟು 14 ಚುನಾವಣೆಗಳನ್ನು ಎದುರಿಸಿದ್ದು, 8 ಚುನಾವಣೆಗಳಲ್ಲಿ ಗೆದ್ದಿದ್ದಾರೆ. 6 ಬಾರಿ ಸಂಸದರಾಗಿ 2 ಬಾರಿ ಶಾಸಕರಾಗಿದ್ದ ಪ್ರಸಾದ್ 7 ಪ್ರಧಾನಿಗಳನ್ನು ಕಂಡಿದ್ದಾರೆ. ಹೌದು, 1974 ರಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಡಿ. ಸತ್ಯನಾರಾಯಣ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಡಿಎಂಕೆ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಪ್ರಸಾದ್ ಕಣಕ್ಕೆ ಇಳಿಯುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು.
ಕಾಂಗ್ರೆಸ್ ಎಷ್ಟೇ ಒತ್ತಡ ತಂದರೂ ಸ್ಪರ್ಧೆಯಿಂದ ಹಿಂದೆ ಸರಿಯದೇ ಪೈಪೋಟಿ ನೀಡಿ 4ನೇ ಸ್ಥಾನವನ್ನು ಆ ಚುನಾವಣೆಯಲ್ಲಿ ಪಡೆದಿದ್ದರು. ಇವರು ಒಡ್ಡಿದ್ದ ಸ್ಪರ್ಧೆ ರಾಜಕೀಯ ಧುರೀಣರ ಗಮನ ಸೆಳೆದು ಕೊನೆಗೆ 1974ರಲ್ಲಿ ಸಂಸ್ಥಾ ಕಾಂಗ್ರೆಸ್ ಸೇರಿ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಹುರುಪಿನಿಂದ ಸಂಘಟನೆ ಮಾಡಿ ಗಮನ ಸೆಳೆದಿದ್ದರು. ತುರ್ತು ಪರಿಸ್ಥಿತಿ ಬಳಿಕ ಜಯಪ್ರಕಾಶ್ ಕರೆ ನೀಡಿದಂತೆ ವಿಪಕ್ಷಗಳು ಸೇರಿ ಒಂದು ಪಕ್ಷ - ಒಂದು ಧ್ವಜ ರಚಿಸಿಕೊಂಡು ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು.
1977 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಲೋಕದಳ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿ.ರಾಚಯ್ಯ ವಿರುದ್ಧ ಪರಾಭವಗೊಂಡಿದ್ದರು. 1978 ರಲ್ಲಿ ಟಿ. ನರಸಿಪುರ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಇಂದಿರಾ ಕಾಂಗ್ರೆಸ್ನ ಅಭ್ಯರ್ಥಿ 28,061 ಮತಗಳನ್ನು ಪಡೆದ ಪಿ. ವೆಂಕಟರಮಣ ಗೆದ್ದರೆ ಶ್ರೀನಿವಾಸಪ್ರಸಾದ್ 20,034 ಪಡೆದು ಮೂರನೇ ಚುನಾವಣೆಯಲ್ಲೂ ಪರಾಭವಗೊಂಡಿದ್ದರು.
1980ರ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಶ್ರೀನಿವಾಸ ಪ್ರಸಾದ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದು ಬಿ. ರಾಚಯ್ಯ ವಿರುದ್ಧ ಗೆದ್ದು ಮೊದಲ ಬಾರಿ ಸಂಸತ್ ಸದಸ್ಯರಾಗಿದ್ದರು. ಆ ಚುನಾವಣೆಯಲ್ಲಿ ಪ್ರಸಾದ್ 2,28,748 ಮತಗಳನ್ನು ಪಡೆದರೇ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ - ಯು ನ ಬಿ.ರಾಚಯ್ಯ ಅವರಿಗೆ 1,18,287, ಜನತಾ ಪಕ್ಷದ ಸಿದ್ದಯ್ಯಗೆ 36 ಸಾವಿರ ಮತಗಳು ಬಂದಿದ್ದವು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತಾಯಿ ಠೇವಣಿ ಹಣವನ್ನು ಕೊಟ್ಟು ಶುಭ ಹಾರೈಸಿದ್ದರು ಎಂದು ಸ್ವಾಭಿಮಾನಿಯ ನೆನಪುಗಳು ಎಂಬ ತಮ್ಮ ಜೀವನಗಾಥೆಯಲ್ಲಿ ಪ್ರಸಾದ್ ದಾಖಲಿಸಿದ್ದಾರೆ.
ಮೊದಲ ಬಾರಿ 1980 ರಲ್ಲಿ ಸಂಸದರಾದ ಬಳಿಕ ಪ್ರಸಾದ್ 1984, 1989, 1991 ಹೀಗೆ ಸತತ ನಾಲ್ಕು ಚುನಾವಣೆಗಳಲ್ಲಿ ಜಯ ಗಳಿಸಿದ್ದರು. 1984ರಲ್ಲಿ ಜನತಾ ಪಕ್ಷದ ಮಲ್ಲೇಶಯ್ಯ, 1989ರಲ್ಲಿ ಜನತಾ ದಳದ ದೇವನೂರು ಶಿವಮಲ್ಲು 1991ರಲ್ಲಿ ಜನತಾದಳದ ಡಾ.ಎಚ್.ಸಿ. ಮಹಾದೇವಪ್ಪ ಅವರನ್ನು ಶ್ರೀನಿವಾಸಪ್ರಸಾದ್ ಸೋಲಿಸಿದ್ದರು.
1996ರ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿಕೆಟ್ ಸಿಗದೇ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡರು. ಸಂಯುಕ್ತರಂಗ ಸರ್ಕಾರ ಉರುಳಿದ್ದರಿಂದ 1998 ರಲ್ಲಿ ಮತ್ತೇ ಚುನಾವಣೆ ಎದುರಾಗಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದರು. ಆದರೆ, ಎರಡನೇ ಬಾರಿ ಎ. ಸಿದ್ದರಾಜು ಜನತಾ ದಳದಿಂದ ಆಯ್ಕೆಯಾಗಿದ್ದರು.