ಬೆಳಗಾವಿ: ವಿಧಾನಪರಿಷತ್ನಲ್ಲಿಂದು ನಡೆದ ಕಲಾಪದಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ಸಮಸ್ಯೆಗಳ ಕುರಿತು ಈ ಭಾಗದ ಸದಸ್ಯರು ದನಿ ಎತ್ತಿದರು. ಕಲಾಪದಲ್ಲಿ ಹಾಜರಾತಿ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆದ ಘಟನೆಯೂ ನಡೆಯಿತು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಿದ ವೇಳೆ ಮಾತನಾಡಿದ ಹಿರಿಯ ಸದಸ್ಯ ಪ್ರಕಾಶ ಹುಕ್ಕೇರಿ, ಬೆಳಗಾವಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಪ್ರಾಧ್ಯಾಪಕರು, ವೈದ್ಯರು, ನರ್ಸ್, ಸಿಬ್ಬಂದಿ ಸೇರಿ 585 ಮಂದಿ ನೇಮಕಾತಿಗೆ 38 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ತಕ್ಷಣ ಸರ್ಕಾರ ಅನುದಾನ ಒದಗಿಸಿ ಆಸ್ಪತ್ರೆ ಕಾರ್ಯಾರಂಭ ಮಾಡಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೇ, ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ ವಿಶೇಷ ಅನುದಾನ ನೀಡುವಂತೆ, ಹಿಂದುಳಿದಿರುವ ಕಿತ್ತೂರು ಕರ್ನಾಟಕಕ್ಕೂ ವಿಶೇಷ ಅನುದಾನ ಒದಗಿಸಬೇಕು. ಬಹುದಿನಗಳ ಬೇಡಿಕೆ ಆಗಿರುವ ಚಿಕ್ಕೋಡಿ ಜಿಲ್ಲೆ ರಚನೆ ಮಾಡಬೇಕು. ಚಿಕ್ಕೋಡಿಯಲ್ಲಿ ಸದ್ಯ 100 ಹಾಸಿಗೆ ಆಸ್ಪತ್ರೆಯಿದ್ದು, ಇದನ್ನು 250 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ಹಾಸಿಗೆ ಕೊರತೆಯಿಂದ ಇಲ್ಲಿನ ಜನರು ಸಾಂಗಲಿ, ಮಿರಜ್ ಆಸ್ಪತ್ರೆಗೆ ಹೋಗುವ ಸ್ಥಿತಿಯಿದೆ. ಬೆಳಗಾವಿಗೆ ಮಂಜೂರಾಗಿರುವ ಕ್ಯಾನ್ಸರ್ ಆಸ್ಪತ್ರೆಗೆ 10 ಎಕರೆ ಜಾಗದ ಕೊರತೆಯಿದೆ. ಹಾಗಾಗಿ, ಚಿಕ್ಕೋಡಿಯಲ್ಲಿ ನಾನು ಜಾಗ ಒದಗಿಸುತ್ತೇನೆ. ಈ ಸಂಬಂಧ ಸಿಎಂ ಅವರನ್ನು ಕೂಡ ಭೇಟಿಯಾಗಿದ್ದು, ತಕ್ಷಣ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರ ಕ್ರಮ ವಹಿಸುವಂತೆ ಆಗ್ರಹಿಸಿದರು.