ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ:ನಾನು ಹಿಟ್ಲರ್ ಆಗಿದ್ದರೆ ವಿನಯ್ ಕುಲಕರ್ಣಿ ಧಾರವಾಡ ಗ್ರಾಮೀಣ ಮತಕ್ಷೇತ್ರದಿಂದ ಗೆಲುವು ಸಾಧಿಸಲು ಸಾಧ್ಯವಾಗುತ್ತಿತ್ತೇ?. ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ತಮ್ಮ ವಿರುದ್ಧದ ಹಿಟ್ಲರ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಹಿಟ್ಲರ್ ಆಗಿದ್ದಿದ್ದರೆ ಚುನಾವಣೆಯೇ ನಡೆಯುತ್ತಿರಲಿಲ್ಲ. ಇದರ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲ್ಲ ಎಂದರು.
ವಿನಯ್ ಕುಲಕರ್ಣಿ ಜೈಲಿಗೆ ಹೋಗಲು ಜೋಶಿ ಕಾರಣ ಎಂಬ ಆರೋಪದ ಬಗ್ಗೆ ಮಾತನಾಡಿ, ಈ ದೇಶದ ಕಾನೂನಿನ ಬಗ್ಗೆ, ನ್ಯಾಯಾಲಯಗಳ ಬಗ್ಗೆ ಕಾಂಗ್ರೆಸ್ನವರಿಗೆ ನಂಬಿಕೆ ಇಲ್ಲ. ಟ್ರಯಲ್ ಕೋರ್ಟ್ನಿಂದ ಸುಪ್ರೀಂ ಕೋರ್ಟ್ವರೆಗೂ ಅವರ ಕೇಸ್ಗಳು ನಡೆದಿವೆ. ಹಾಗಾಗಿ ಹತಾಶತನದಿಂದ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ಹೇಳಿದರು.
ಹಿಂದಿ ಪ್ರಚಾರ ಸಭೆ ವಿಚಾರದಲ್ಲಿಯೂ ರಾಜಕೀಯ ನಡೆಯುತ್ತಿದೆ ಎಂಬ ಆರೋಪಕ್ಕೆ, ಹಿಂದಿ ಪ್ರಚಾರ ಸಭೆ ಸ್ವಾಯತ್ತ ಸಂಸ್ಥೆ. ಮಹಾತ್ಮ ಗಾಂಧಿಯವರು ಅದನ್ನು ಆರಂಭಿಸಿದ್ದರು. ಈ ಹಿಂದೆ ವಿಭೂತಿ ಅನ್ನೋರು ಇದಕ್ಕೆ ಅಧ್ಯಕ್ಷರಿದ್ದರು. ಈಗ ಮತ್ತೊಬ್ಬರು ಅಧ್ಯಕ್ಷರಾಗಿದ್ದಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಪಕ್ಷಗಳಿಂದ ಮ್ಯಾಚ್ ಫಿಕ್ಸಿಂಗ್ ಎಂಬ ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಲು ಜೋಶಿ ನಿರಾಕರಿಸಿದರು. ಶ್ರೀಗಳ ಬಗ್ಗೆ ಅಪಾರ ಗೌರವವಿದೆ. ಅವರ ಪ್ರತಿ ಹೇಳಿಕೆಯನ್ನೂ ಆಶೀರ್ವಾದವೆಂದು ತಿಳಿಯುತ್ತೇನೆ. ಜನ ಪ್ರಬುದ್ಧರಿದ್ದಾರೆ. ಜನರ ಆಶೀರ್ವಾದ ನನಗೆ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ನಿಂದ ದಿಂಗಾಲೇಶ್ವರ ಶ್ರೀಗಳಿಗೆ ಬಾಹ್ಯ ಬೆಂಬಲ ನೀಡುವ ಚರ್ಚೆ ವಿಚಾರವಾಗಿ ಮಾತನಾಡುತ್ತಾ, ಕಾಂಗ್ರೆಸ್ನವರು ತಮ್ಮ ಕ್ಯಾಂಡಿಡೇಟ್ ಹಾಕಿದ್ದಾರೆ. ಬಿಜೆಪಿ ನನ್ನನ್ನು ಅಖಾಡಕ್ಕೆ ಇಳಿಸಿದೆ. ಆದರೆ ಅವರು ನಮ್ಮ ಪಕ್ಷದವರು ಅಲ್ಲ ಎಂದರು.
ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಗೃಹಲಕ್ಷ್ಮಿ ಹಣ ಸಹಾಯವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರದಾದ್ರೂ ಮನೆಯಲ್ಲಿ ಮಗು ಹುಟ್ಟಿದ್ರೂ ಅದು ಗ್ಯಾರಂಟಿ ಯೋಜನೆಯಿಂದ ಹುಟ್ಟಿದ್ದು ಅಂತ ಹೇಳ್ತಾರೆ. ನಮ್ಮ ಎರಡು ಸಾವಿರದಿಂದ ಹುಟ್ಟಿದ್ದು ಅಂತಾರೆ ಎಂದು ವ್ಯಂಗ್ಯವಾಡಿದರು. ಇದೇ ವೇಳೆ, ಶಿವರಾಮ್ ಹೆಬ್ಬಾರ್ ಪಕ್ಷಕ್ಕೆ ದ್ರೋಹ ಬಗೆಗಿದ್ದಾರೆ. ಇನ್ನು ಅವರ ಪುತ್ರನ ಕಾಂಗ್ರೆಸ್ ಸೇರ್ಪಡೆ ಅಚ್ಚರಿ ತಂದಿಲ್ಲ ಎಂದರು.
ಇದನ್ನೂ ಓದಿ:ದಿಂಗಾಲೇಶ್ವರ ಸ್ವಾಮೀಜಿ ಹೇಳಿರುವುದೆಲ್ಲವೂ ನನಗೆ ಆಶೀರ್ವಾದ: ಪ್ರಹ್ಲಾದ್ ಜೋಶಿ - Pralhad Joshi