ಬೆಂಗಳೂರು:ಲೋಕಸಭಾ ಚುನಾವಣೆ ಸಮಾವೇಶದ ಹಿನ್ನೆಲೆ ರಾಜಧಾನಿಯ ಅರಮನೆಗೆ ಮೈದಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಆಗಮಿಸಲಿದ್ದು, ಈ ವೇಳೆ ಅಹಿತಕರ ಘಟನೆ ಆಗದಂತೆ ನಗರ ಪೊಲೀಸರು ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಬಂದೋಬಸ್ತ್ಗಾಗಿ ಎರಡು ಸಾವಿರ ಪೊಲೀಸರ ನಿಯೋಜನೆ ಮಾಡಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ನೇತೃತ್ವದಲ್ಲಿ ಭದ್ರತೆ ನಿಯೋಜನೆಗೊಂಡಿದೆ.
ಸಮಾವೇಶ ನಡೆಯುವ ಅರಮನೆ ಮೈದಾನ, ಹೆಲಿಪ್ಯಾಡ್, ಮೇಕ್ರಿ ಸರ್ಕಲ್ ಹಾಗೂ ಬಳ್ಳಾರಿ ರಸ್ತೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆಯಿದ್ದು, ಮೇಕ್ರಿ ಸರ್ಕಲ್‌ನಲ್ಲಿ ಚೊಂಬು ಪ್ರದರ್ಶಿಸಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಈ ಹಿನ್ನೆಲೆ ಸರ್ಕಲ್‌ನಲ್ಲಿ ಹೆಚ್ಚುವರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೇಕ್ರಿ ಸರ್ಕಲ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶವಿಲ್ಲ. ಒಂದು ವೇಳೆ ಪ್ರತಿಭಟನೆ ನಡೆಸಲು ಮುಂದಾದ್ರೆ ಕೂಡಲೇ ವಶಕ್ಕೆ ಪಡೆದು ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ.
ಸಮಾವೇಶದ ನಂತರ ರಸ್ತೆ ಮಾರ್ಗವಾಗಿ ಹೆಚ್.ಎ .ಎಲ್. ತಲುಪಲಿರುವ ಮೋದಿಗೆ ಹೆಚ್.ಎ.ಎಲ್ ಮಾರ್ಗದಲ್ಲೂ ಕೂಡ ಹೆಜ್ಜೆ ಹಜ್ಜೆಗೆ ಪೊಲೀಸರ ನಿಯೋಜನೆಗೊಳ್ಳಲಿದ್ದಾರೆ. ಇದೇ ವೇಳೆ, ವಾಹನ ಸವಾರರಿಗೆ ಅಡಚಣೆಯಾಗದಂತೆ ಸಂಚಾರಿ ಪೊಲೀಸರಿಂದ ಕ್ರಮ ಜರುಗಿಸಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ. ಇಂದು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ.