ಬೆಂಗಳೂರು:ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ವಿಡಿಯೋ ಹಂಚಿಕೊಂಡ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ನೋಯ್ಡಾ ಮೂಲದ ಲೇಖಕ, ಯೂಟ್ಯೂಬರ್ ಅಜಿತ್ ಭಾರ್ತಿಗೆ ನಗರದ ಹೈಗ್ರೌಂಡ್ಸ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಗುರುವಾರ ನೋಟಿಸ್ ಜಾರಿಗೊಳಿಸಲಾಗಿದ್ದು, ಸ್ವೀಕರಿಸಿದ 7 ದಿನಗಳೊಳಗಾಗಿ ಬೆಳಗ್ಗೆ 11 ಗಂಟೆಗೆ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಪ್ರಕರಣದ ಹಿನ್ನೆಲೆ:ಜೂನ್ 6ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಅಜಿತ್ ಭಾರತಿ ವಿರುದ್ಧ ಕೆಪಿಸಿಸಿ ಕಾನೂನು ಘಟಕದಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ''ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶ್ರೀರಾಮ ಮಂದಿರದ ಬದಲಿಗೆ ಬಾಬರಿ ಮಸೀದಿಯನ್ನು ಮರಳಿ ತರಲು ಉದ್ದೇಶಿಸಿದ್ದಾರೆ ಎಂದು ಅಜಿತ್ ಭಾರತಿ ಹೇಳಿದ್ದಾರೆ. ಆದರೆ, ರಾಹುಲ್ ಗಾಂಧಿಯವರು ತಮ್ಮ ಯಾವುದೇ ಭಾಷಣಗಳಲ್ಲಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮತ್ತು ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಅಜಿತ್ ಭಾರತಿಯವರು ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಸಾರ್ವಜನಿಕ ವ್ಯವಸ್ಥೆಯಲ್ಲಿ ಶಾಂತಿ ಕದಡುವ ಮತ್ತು ಪ್ರಚೋದಿಸುವ ಸ್ಪಷ್ಟ ಉದ್ದೇಶದಿಂದ ಕೂಡಿದೆ'' ಎಂದು ಆರೋಪಿಸಿ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ.ಬೋಪಣ್ಣ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು.