ಬೆಂಗಳೂರು:ಹಿರಿಯ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ವಿರುದ್ಧ ಪೊಲೀಸ್ ವಿಚಾರಣೆ ನಡೆಯಲು ರಾಜ್ಯಪಾಲರ ಒತ್ತಡವೇ ಕಾರಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಗೋದ್ರಾ ಮಾದರಿ ಘಟನೆಗಳು ನಡೆಯಬಹುದು ಎಂದು ಎಚ್ಚರಿಕೆ ನೀಡಿದ್ದ ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ರಾಜ್ಯಪಾಲರು ತನಿಖೆ ಆಗುತ್ತಿದೆಯಾ ಇಲ್ಲವೇ ? ಎಂದು ಪದೇ ಪದೆ ಕೇಳಿದ್ದಾರೆ. ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯಿಂದ ಬಿ.ಕೆ ಹರಿಪ್ರಸಾದ್ ವಿಚಾರಣೆಗೆ ಪೊಲೀಸರು ತೆರಳಿದ್ದರು ಎಂದು ಸಮರ್ಥಿಸಿಕೊಂಡರು.
ಬಿಜೆಪಿ ಎಲ್ಲೆಲ್ಲಿ ಇಲ್ಲ ಅಲ್ಲಿ ರಾಜ್ಯಪಾಲರ ಆಳ್ವಿಕೆ:ರಾಜ್ಯ ಸರ್ಕಾರ ಪೊಲೀಸರನ್ನು ಕಳಿಸಿ ಮುಜುಗರ ಉಂಟು ಮಾಡಿದೆ ಎಂದು ಹೇಳಲು ಆಗುವುದಿಲ್ಲ. ಆದರೆ ಈ ವಿಚಾರವಾಗಿ ರಾಜ್ಯಪಾಲರು ಏಕೆ ಇಷ್ಟೊಂದು ಆಸಕ್ತಿ ಹೊಂದಿದ್ದಾರೆ ?. ಕೇಂದ್ರ ಸರ್ಕಾರದಿಂದ ಅವರಿಗೆ ಏನಾದರೂ ನಿರ್ದೇಶನ ಇದೆಯಾ?. ಸರ್ಕಾರಕ್ಕೆ ಬಿ.ಕೆ.ಹರಿಪ್ರಸಾದ್ ಅವರಿಗೆ ಮುಜುಗರ ಮಾಡಬೇಕು ಎಂದಿಲ್ಲ. ಎಲ್ಲೆಲ್ಲಿ ಬಿಜೆಪಿ ಇಲ್ಲ, ಅಲ್ಲಲ್ಲಿ ರಾಜ್ಯಪಾಲರ ಮೂಲಕ ಬಿಜೆಪಿಗರು ಆಳ್ವಿಕೆ ಮಾಡಲು ಹೊರಟಿದ್ದಾರೆ. ನಾವು ಏನೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದ ಕಾನೂನು ಸುವ್ಯವಸ್ಥೆಗೂ ಕರ್ನಾಟಕ ರಾಜ್ಯಪಾಲರಿಗೂ ಏನು ಸಂಬಂಧ?. ಹಿಂದಿನ ಸರ್ಕಾರ ಇದ್ದಾಗ ಯಾವತ್ತೂ ಈ ರೀತಿ ಆಗಿಲ್ಲ. ಈ ಬಾರಿ ಏಕೆ ಆಗುತ್ತಿದೆ?. ಜನರು ಇದರ ಬಗ್ಗೆ ಚಿಂತನೆ ಮಾಡಬೇಕು ಎಂದು ತಿಳಿಸಿದರು.
ಪ್ರಚೋದನಾಕಾರಿ ಹೇಳಿಕೆ ನೀಡಿದ್ರೆ ಕಠಿಣ ಕ್ರಮ: ರಾಜ್ಯ ಸರ್ಕಾರ ವಿರುದ್ಧ ಯಾರೇ ಪ್ರಚೋದನಾಕಾರಿ ಹೇಳಿಕೆ ಕೊಟ್ಟರೂ ಹಗುರವಾಗಿ ಪರಿಗಣಿಸುವುದಿಲ್ಲ. ಅನಂತ್ ಕುಮಾರ್ ಹೆಗಡೆ ಅಥವಾ ಕಲ್ಲಡ್ಕ ಪ್ರಭಾಕರ್ ಭಟ್ ಯಾರೇ ಇದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಮೀರಲು ಯಾರನ್ನೂ ಬಿಡುವುದಿಲ್ಲ. ಇಲ್ಲಿ ಉತ್ತರ ಪ್ರದೇಶದ ಆಡಳಿತ ನಡೆಯುವುದಿಲ್ಲ. ಇವರೆಲ್ಲರೂ ಇಂದಲ್ಲ, ನಾಳೆ ಒಳಗಡೆ ಹೋಗುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಇಟ್ಟುಕೊಳ್ಳಬೇಡಿ ಎಂದು ಕುಟುಕಿದರು.
ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ:ಸರ್ಕಾರ ಕ್ರಿಮಿನಲ್ಸ್ ಜೊತೆ ನಿಂತಿದೆ. ಹಾನಗಲ್ನಲ್ಲಿ ಗ್ಯಾಂಗ್ ರೇಪ್ ಆಗಿದೆ. ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳು ಹೊರಗೆ ಬರುತ್ತಿವೆ. ಇಂತಹ ಗ್ಯಾಂಗ್ ನಿರಂತರವಾಗಿ ಆ್ಯಕ್ಟೀವ್ ಆಗಿದೆ. ಆದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಅವರು, ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಅದಗೆಟ್ಟಿದೆ. ಪ್ರಕರವನ್ನು ಎಸ್‌ಐಟಿ ಗೆ ವರ್ಗಾವಣೆ ಮಾಡಿ ಎಂದು ಹೇಳಿದರೂ ಸರ್ಕಾರ ಕೊಡುತ್ತಿಲ್ಲ. ಪೋಕ್ಸೋ ಪ್ರಕರಣದಡಿ ಕೇಸ್ ದಾಖಲು ಮಾಡಿಲ್ಲ. ಸುಳ್ಳು ಮೆಡಿಕಲ್ ಎಕ್ಸಾಮ್ ಆಗಿವೆ. ಇದು ಮೆಡಿಕೋ ಲೀಗಲ್ ಕೇಸ್, ಸರ್ಕಾರ ಸಂತ್ರಸ್ತೆ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ಪ್ರಕರಣ ಸಂಬಂಧ ವಿಚಾರಿಸಲು ಶಾಸಕರಿಗೆ ಹೇಳಿದ್ದೀನಿ ಅಂತಾ ಸಿಎಂ ಹೇಳ್ತಾರೆ. ಅಂದ್ರೆ ಸರ್ಕಾರ ಸತ್ತಿದೆಯಾ? ಆರೋಗ್ಯ ಇಲಾಖೆ ಸತ್ತಿದೆಯಾ? ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಇದನ್ನೂಓದಿ:ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರೆ ಹೇಗೆ?: ಬಿ.ಕೆ ಹರಿಪ್ರಸಾದ್