ಕಲಬುರಗಿ:ಇಲ್ಲಿನಜಿಲ್ಲಾಸ್ಪತ್ರೆ(ಜೀಮ್ಸ್)ಯಿಂದ ಅಪಹರಿಸಲ್ಪಟ್ಟಿದ್ದ ನವಜಾತ ಗಂಡು ಶಿಶುವನ್ನು ನಗರ ಪೊಲೀಸರು ಪತ್ತೆ ಹಚ್ಚಿ ತಾಯಿಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಶು ಅಪಹರಿಸಿದ ಆರೋಪದಡಿ ಎಂಎಸ್‌ಕೆ ಮಿಲ್ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಎಂಬುವವರನ್ನು ಬಂಧಿಸಲಾಗಿದೆ.
ಅಪಹರಣ ಆಗಿದ್ದು ಹೇಗೆ?:ಕಸ್ತೂರಿ ಎಂಬವರು ಸೋಮವಾರ (ನ. 25) ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ನರ್ಸ್ ವೇಷದಲ್ಲಿ ವಾರ್ಡ್ ಸಂಖ್ಯೆ 115 ರಲ್ಲಿದ್ದ ಕಸ್ತೂರಿ ಬಳಿಗೆ ಬಂದ ಇಬ್ಬರು ಮಹಿಳೆಯರು ಮಗುವಿಗೆ ರಕ್ತ ತಪಾಸಣೆ ಮಾಡಬೇಕು ಕರೆದುಕೊಂಡು ಬನ್ನಿ ಎಂದು ಹೇಳಿದ್ದರು. ಅವರ ಮಾತನ್ನು ನಂಬಿ ಬಾಣಂತಿ ಕಸ್ತೂರಿ ಚಿಕ್ಕಮ್ಮ ಚಂದ್ರಕಲಾ ಮಗುವನ್ನು ತೆಗೆದುಕೊಂಡು ನರ್ಸ್ ವೇಷ ತೊಟ್ಟು ಬಂದಿದ್ದ ಮಹಿಳೆಯರ ಜೊತೆಗೆ ಹೋಗಿದ್ದರು.
ಆಸ್ಪತ್ರೆಯಿಂದ ಕಿಡ್ನಾಪ್ ಆಗಿದ್ದ ಶಿಶು ಮರಳಿ ತಾಯಿ ಮಡಿಲಿಗೆ (ETV Bharat) ನಂತರ ಮಗುವಿಗೆ ಸಂಬಂಧಿಸದ ಫೈಲ್ ಬೇಕು, ಹೀಗಾಗಿ ನೀವು ಮಗುವನ್ನು ನಮ್ಮ ಕೈ ಕೊಟ್ಟು ಫೈಲ್ ತೆಗೆದುಕೊಂಡು ಬನ್ನಿ ಎಂದು ಚಂದ್ರಕಲಾ ಅವರಿಗೆ ಹೇಳಿದ್ದರು. ಅದರಂತೆ ಚಂದ್ರಕಲಾ ಮಗುವನ್ನು ಅವರಿಗೆ ಒಪ್ಪಿಸಿ ಫೈಲ್ ತರಲು ವಾರ್ಡ್ಗೆ ವಾಪಸ್ ಹೋಗಿದ್ದರು. ಬಳಿಕ ಇಬ್ಬರು ಮಹಿಳೆಯರು ಮಗುವನ್ನು ಅಪಹರಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದರು.
ಮಗು ಪತ್ತೆಗೆ 3 ವಿಶೇಷ ತಂಡ ರಚನೆ:ಬಳಿಕ ಕಸ್ತೂರಿ ಅವರ ಕುಟುಂಬ ಇಡೀ ಆಸ್ಪತ್ರೆ ಹುಡುಕಾಡಿದರೂ ಮಗು ಪತ್ತೆಯಾಗದ ಹಿನ್ನೆಲೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶಿಶು ಪತ್ತೆಗೆ ಪೊಲೀಸ್ ಕಮಿಷನರ್ ಡಾ ಶರಣಪ್ಪ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ತ್ವರಿತಗತಿಯಲ್ಲಿ ತನಿಖೆ ನಡೆಸಿದ ಪೊಲೀಸರು, ಶಿಶುವನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಸ್ವತಃ ಕಮಿಷನರ್ ಡಾ ಶರಣಪ್ಪ, ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ತರಳಿ ಹಸುಳೆಯನ್ನು ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಗೆ ಒಪ್ಪಿಸಿದ್ದಾರೆ. ಮಗುವನ್ನು ಕಂಡ ತಾಯಿಯ ಖುಷಿಗೆ ಪಾರವೇ ಇರಲಿಲ್ಲ.
ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್ ಕಮಿಷನರ್ ಡಾ ಶರಣಪ್ಪ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
50 ಸಾವಿರ ಹಣಕ್ಕೆ ಡೀಲ್ ಮಾಡಿಕೊಂಡಿದ್ದ ಬಂಧಿತರು:ಖೈರುನ್ ಎಂಬ ಮಹಿಳೆಗೆ ಕಳೆದ ಏಳೆಂಟು ವರ್ಷದಿಂದ ಮಕ್ಕಳಾಗಿರಲಿಲ್ಲ. ಇದರಿಂದ ಗಂಡು ಮಗುವನ್ನು ಪಡೆಯಲು ಬಯಸಿದ್ದರು. ಬಂಧಿತ ಮಹಿಳೆಯರು ಗಂಡು ಮಗುವನ್ನು ತಂದು ಕೊಡುವುದಾಗಿ ಹೇಳಿ ಖೈರುನ್ ಅವರ ಜೊತೆ 50 ಸಾವಿರ ಹಣಕ್ಕೆ ಡೀಲ್ ಫಿಕ್ಸ್ ಮಾಡಿದ್ದರು. ಮುಂಗಡವಾಗಿ 25 ಸಾವಿರ ರೂ ಹಣ ಪಡೆದಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ವಿಜಯಪುರ: ಮಗು ಅಪಹರಣ ಪ್ರಕರಣ ಸುಖಾಂತ್ಯ, ತಾಯಿ ಮಡಿಲು ಸೇರಿದ ಮಗು