ಬೆಂಗಳೂರು:ಒಂಟಿ ಮಹಿಳೆಯನ್ನು ಹತ್ಯೆಗೈದು ಚಿನ್ನಾಭರಣ, ಮೊಬೈಲ್ ಫೋನ್ ಹಾಗೂ ಕಾರಿನೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಕೊಡಿಗೇಹಳ್ಳಿ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಬನಶಂಕರಿ ಮೂಲದ ನವೀನ್ ಗೌಡ (27) ಬಂಧಿತ ಆರೋಪಿ. ಏ.19ರಂದು ಕೊಡಿಗೇಹಳ್ಳಿಯ ಗಣೇಶ ನಗರದಲ್ಲಿ ನಡೆದಿದ್ದ ಶೋಭಾ (48) ಎಂಬವರನ್ನು ಆರೋಪಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
ಈ ಕುರಿತು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಮಾತನಾಡಿ, "ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಶನಿವಾರ ಮಹಿಳೆ ಹತ್ಯೆ ಪ್ರಕರಣ ದಾಖಲಾಗಿತ್ತು. 48 ವಯಸ್ಸಿನ ಮಹಿಳೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಕಾರ್ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಆ ಮಹಿಳೆಯ ಮೃತದೇಹ ಮನೆಯಲ್ಲೇ ಪತ್ತೆಯಾಗಿತ್ತು. ತಾಯಿ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ಮಗಳು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ಕೊಲೆಗೈದಿರುವ ಅಂಶ ಬೆಳಕಿಗೆ ಬಂದಿದೆ" ಎಂದು ಮಾಹಿತಿ ನೀಡಿದ್ದಾರೆ.