ಬೆಂಗಳೂರು:ಪೋಕ್ಸೋಆರೋಪದಲ್ಲಿ ಸಿಐಡಿ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಬಂಧಿಸದಂತೆ ಹೈಕೋರ್ಟ್ ಇಂದು ನಿರ್ದೆಶನ ನೀಡಿದೆ. ಇದರಿಂದಾಗಿ ಮಾಜಿ ಸಿಎಂ ಸದ್ಯಕ್ಕೆ ಬಂಧನ ಭೀತಿಯಿಂದ ನಿರಾಳರಾಗಿದ್ದಾರೆ.
ತಮ್ಮ ವಿರುದ್ಧ ದಾಖಲಾದ ಪೋಕ್ಸೋ ಆರೋಪದಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದುಕೋರಿ ಮತ್ತು ಈ ಸಂಬಂಧ ಬಂಧನ ಭೀತಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ, ಮುಂದಿನ ವಿಚಾರಣೆವರೆಗೂ ಬಂಧನದಂತ ಕಠಿಣ ಕ್ರಮಕ್ಕೆ ಮುಂದಾಗದಂತೆ ಸೂಚನೆ ನೀಡಿದೆ.
ಪ್ರಕರಣದ ವಿಚಾರಣೆಗೆ ಹಾಜರಾಗಲು ಸೂಚಿಸಿ ಸಿಐಡಿ ಪೊಲೀಸರು ಎರಡನೇ ನೋಟಿಸ್ ಜಾರಿ ಮಾಡಿದ್ದರಿಂದ ಮತ್ತು ನಗರದ 1ನೇ ತ್ವರಿಗತಿ ನ್ಯಾಯಾಲಯ (ಪೋಕ್ಸೋ ವಿಶೇಷ ನ್ಯಾಯಾಲಯ) ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಯಡಿಯೂರಪ್ಪಗೆ ಬಂಧನ ಭೀತಿ ಎದುರಾಗಿತ್ತು. ಆದರೆ, ಹೈಕೋರ್ಟ್ ಆದೇಶದಿಂದ ನಿರಾಳರಾಗಿದ್ದಾರೆ.
ಸರ್ಕಾರದ ವಾದ ತಳ್ಳಿ ಹಾಕಿರುವ ನ್ಯಾಯಪೀಠ, ಯಡಿಯೂರಪ್ಪ ಅವರನ್ನು ಬಂಧಿಸಬಾರದು. ಸಿಐಡಿ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಜ.17ರಂದು ಯಡಿಯೂರಪ್ಪ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು. ಜೊತೆಗೆ, ಅರ್ಜಿ ಕುರಿತು ಸಿಐಡಿ ಪೊಲೀಸರು ಮತ್ತು ಪ್ರಕರಣದ ದೂರುದಾರ ಮಹಿಳೆಯ ಪುತ್ರನಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜು.28ಕ್ಕೆ ಮುಂದೂಡಿತು.
ದೇಶ ಬಿಟ್ಟು ಹೋಗಿಲ್ಲ: ಸಿಐಡಿಯ ಮೊದಲ ನೋಟಿಸ್ನಂತೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿದ್ದರು. ಎರಡನೇ ನೋಟಿಸ್‌ಗೆ ಪ್ರತ್ಯುತ್ತರಿಸಲು ಸಮಯ ಕೇಳಿದ್ದಾರೆ. ಇದೇ 17ಕ್ಕೆ ಖುದ್ದು ಹಾಜರಾಗುವುದಾಗಿ ಅವರೇ ತಿಳಿಸಿದ್ದಾರೆ. ಈ ವೇಳೆ ಬಂಧಿಸುವ ಅಗತ್ಯವೇನಿದೆ? ಯಡಿಯೂರಪ್ಪ ಅವರು ದೇಶಬಿಟ್ಟು ಪರಾರಿಯಾಗುವ ಭಯ ನಿಮ್ಮಲ್ಲಿದೆಯೇ?. ಯಾರನ್ನು ಸಂತುಷ್ಟಗೊಳಿಸಲು ಸಿಐಡಿ ಬಂಧಿಸಲು ಬಯಸುತ್ತಿದೆ ಎಂದು ವಿಚಾರಣೆ ವೇಳೆ ನ್ಯಾಯಪೀಠ ಪ್ರಶ್ನಿಸಿತು.
ಅಲ್ಲದೆ, ವಿಚಾರಣೆಗೆ ಸಮಾಯವಕಾಶ ಕೋರಿದ್ದನ್ನು ಪರಿಗಣಿಸದೆ ತನಿಖಾಧಿಕಾರಿ ಅಧೀನ ನ್ಯಾಯಾಲಯದ ಮೆಟ್ಟಿಲೇರಿ ವಾರೆಂಟ್ ಪಡೆಯಲಾಗಿದೆ. ಬಂಧಿಸಲು ಅನುಮತಿಸುವಂತೆ ಹೈಕೋರ್ಟ್‌ಗೆ ಕೋರಲಾಗಿದೆ. ಇದೆಲ್ಲಾ ನೋಡುತ್ತಿದ್ದರೆ ವ್ಯವಸ್ಥಿತವಾಗಿ ಯಡಿಯೂರಪ್ಪರನ್ನು ಬಂಧಿಸಲೇಬೇಕೆಂಬ ಹಟಕ್ಕೆ ಬಿದ್ದಂತಿದೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾದವರು. ಅವರು ಈ ಹಿಂದೆ ಶಾಸನ ರೂಪಕರಾಗಿದ್ದರು. ತಮ್ಮ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಸ್ವಾಭಾವಿಕವಾಗಿಯೇ ಆರೋಗ್ಯ ಸಮಸ್ಯೆಗಳಿರುತ್ತವೆ. ಇಂತಹ ವ್ಯಕ್ತಿಯ ಬಗ್ಗೆ ತನಿಖೆ ನಡೆಸುವಾಗ ಪೊಲೀಸರ ನಡೆಯ ಬಗ್ಗೆ ಸಂಶಯ ಬಾರದಂತೆ ಮುಂದುವರಿಯಬೇಕು. ಪ್ರತೀಕಾರದ ಮೇಲೆ ನಡೆದುಕೊಳ್ಳಲಾಗುತ್ತಿದೆ ಎಂಬ ಭಾವನೆ ಮೂಡಬಾರದು. ಆರೋಪಿಯನ್ನು ವಶದಲ್ಲಿರಿಸಿಕೊಂಡೇ ವಿಚಾರಣೆ ನಡೆಸಬೇಕೆಂಬ ನಿಮ್ಮ ಹಟ ಪ್ರಾಮಾಣಿಕ ನಡೆಯಿಂದ ಕೂಡಿಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿಗೇ ಈ ರೀತಿಯ ಭೀತಿ ಆವರಿಸಿದರೆ ಜನಸಾಮಾನ್ಯರ ಗತಿಯೇನು? ಎಂದು ಕಟುವಾಗಿ ಪೀಠ ಅಭಿಪ್ರಾಯಪಟ್ಟಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ, ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಅರ್ಜಿದಾರರು ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗದೆ ದೆಹಲಿಗೆ ಟಿಕೆಟ್ ಬುಕ್ ಮಾಡಿ ಬೆಂಗಳೂರು ಬಿಟ್ಟು ತೆರಳಿದ್ದಾರೆ. ಹೀಗಾಗಿ, ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿದೆ ಎಂಬ ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ಆಕ್ಷೇಪಿಸಿದ ಯಡಿಯೂರಪ್ಪ ಪರ ವಕೀಲರು, ಅರ್ಜಿದಾರರ ವಿರುದ್ಧ ದೂರು ದಾಖಲಿಸಿರುವ ದೂರುದಾರ ಮಹಿಳೆ (ಸದ್ಯ ಬದುಕಿಲ್ಲ) ತನ್ನ ಪತಿ, ಪುತ್ರ, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಒಟ್ಟು 53 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸುವುದೇ ಅವರ ಪ್ರವೃತ್ತಿ. ಇನ್ನೂ ಘಟನೆ ನಡೆದು ಒಂದೂವರೆ ತಿಂಗಳ ನಂತರ ದೂರು ದಾಖಲಿಸಲಾಗಿದೆ. ಇದರಿಂದ ದೂರಿನ ಬಗ್ಗೆ ಅಪ್ರಾಮಾಣಿಕತೆ ಎದ್ದು ಕಾಣುತ್ತಿದೆ.
ಯಡಿಯೂರಪ್ಪ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಸಿಐಡಿ ಮೊದಲ ನೋಟಿಸ್‌ಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಜೂ.10ರಂದು ಎರಡನೇ ಬಾರಿಗೆ ನೋಟಿಸ್ ನೀಡಿದ್ದು, ಜೂ.17ರಂದು ವಿಚಾರಣೆಗೆ ಹಾಜರಾಗಲು ತಿಳಿಸಿದ್ದರೂ ಬಂಧನಕ್ಕೆ ವಾರೆಂಟ್ ಪಡೆಯಲಾಗಿದೆ. ಸರ್ಕಾರ ರಾಜಕೀಯ ಪ್ರತೀಕಾರದ ಧೋರಣೆಯಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಮುಂದಾಗಿದೆ ಎನ್ನುವುದು ತೋರಿಸುತ್ತದೆ ಎಂದು ಆರೋಪಿಸಿದರು.
ಇದನ್ನು ಅಲ್ಲಗೆಳೆದ ರಾಜ್ಯ ಅಡ್ವೋಕೇಟ್ ಜನರಲ್, ಜೂ.11ರಂದು ಬೆಳಗ್ಗೆ ನೋಟಿಸ್ ನೀಡಿದರೆ ಯಡಿಯೂರಪ್ಪ ಅವರು ಸಂಜೆ 5 ಗಂಟೆಗೆ ದೆಹಲಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ರಾತ್ರಿ 9.55ಕ್ಕೆ ದೆಹಲಿಗೆ ಹೋಗಿದ್ದಾರೆ. ಸಭೆ ಇರುವುದರಿಂದ ದೆಹಲಿಗೆ ಹೋಗಿದ್ದು, ಜೂ.17ರಂದು ವಿಚಾರಣೆಗೆ ಹಾಜರಾಗುವುದಾಗಿ ಮರು ದಿನ ಮಧ್ಯಾಹ್ನ ತಿಳಿಸಿದ್ದಾರೆ. ವಾಸ್ತವವಾಗಿ ದೆಹಲಿಯಲ್ಲಿ ಅವರಿಗೆ ಸಭೆಯೇ ಇರಲಿಲ್ಲ. ಅವರು ಸಾಕ್ಷ್ಯ ನಾಶ ಮಾಡಬಹುದು ಎಂಬುದಷ್ಟೇ ತನಿಖಾಧಿಕಾರಿಗಳ ಆತಂಕ. ಅದರಿಂದಲೇ ವಿಚಾರಣಾ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ. ಅದು ಬಿಟ್ಟು ಸರ್ಕಾರ ಯಾವುದೇ ದುರ್ಭಾವನೆಯಿಂದ ನಡೆದುಕೊಳ್ಳುತ್ತಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯೂ ಬಂದಿದೆ ಎಂದರು.
ರಾಜಕೀಯ ಉದ್ದೇಶ ಆರೋಪ: ಈ ಹಿಂದೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯೊಂದರಲ್ಲಿ ಆರೋಪಿಗಳಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜೂ.1ರಂದು ಮತ್ತು ಸಂಸದ ರಾಹುಲ್ ಗಾಂಧಿ ಅವರು ಜೂ.7ರಂದು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಅದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡರ ವಿರುದ್ಧದ ಕ್ರಿಮಿನಲ್ ಪ್ರಕರಣಗಳಲ್ಲಿ ಕ್ರಮ ಜರುಗಿಸಲು ರಾಜ್ಯ ಸರ್ಕಾರ ಮುಂದಾಗಿರುವಂತಿದೆ. ಅದಕ್ಕಾಗಿಯೇ ಕೋರ್ಟ್ ಆಶ್ರಯಿಸಿ ಯಡಿಯೂರಪ್ಪ ವಿರುದ್ಧ ವಾರಂಟ್ ಪಡೆಯಲಾಗಿದೆ ಎಂದು ಯಡಿಯೂರಪ್ಪ ಪರ ವಕೀಲರು ಬಲವಾಗಿ ಆಕ್ಷೇಪಿಸಿದರು. ಈ ವೇಳೆ ಅಡ್ವೋಕೇಟ್ ಜನರಲ್ ಆಕ್ಷೇಪಿಸಿ, ಪ್ರಕರಣಗಳಿಗೆ ಸಂಬಂಧವಿಲ್ಲದ ವಿಚಾರವನ್ನು ನ್ಯಾಯಾಲಯಕ್ಕೆ ವಿವರಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸಿಐಡಿಗೆ ನೋಟಿಸ್:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸಲು ನಿರ್ದೇಶಿಸುವಂತೆ ಕೋರಿ ದೂರುದಾರ ಮಹಿಳೆ ಪುತ್ರನೂ ಆದ ಸಂತ್ರಸ್ತೆ ಸಹೋದರ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠವು, ಸಿಐಡಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಪ್ರತಿವಾದಿಗಳಾಗಿರುವ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ, ನಗರ ಪೊಲೀಸ್ ಆಯುಕ್ತರು, ಸಿಐಡಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪ್ರಕರಣದಲ್ಲಿ ಆರೋಪಿಯೂ ಆಗಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಯಡಿಯೂರಪ್ಪ ಅವರು ನನ್ನ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕುರಿತು ತಾಯಿ 2024ರ ಮಾ.14ರಂದು ಸದಾಶಿವನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದ್ದರು. ಪೊಲೀಸರು ಪೋಕ್ಸೋ ಕಾಯ್ದೆ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354(ಎ) ಅಡಿಯಲ್ಲಿ ಅಪ್ರಾಪ್ತೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿತ್ತು. ಆದರೆ, ದೂರು ದಾಖಲಾಗಿ ಎರಡು ತಿಂಗಳು ಕಳೆದರೂ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಸಿಸಿಟಿವಿ ದೃಶ್ಯಗಳು, ಮೆಮೊರಿಕಾರ್ಡ್ ಮತ್ತು ಹಾರ್ಡ್ ಡಿಸ್ಕ್ ವಶಪಡಿಸಿಕೊಂಡು, ಒಂದು ತಿಂಗಳ ಒಳಗೆ ವರದಿ ಸಲ್ಲಿಸಲು ನಗರ ಪೊಲೀಸ್ ಆಯುಕ್ತರು ಮತ್ತು ಸಿಐಡಿ ಇನ್ಸ್‌ಪೆಕ್ಟರ್‌ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ:ಬಿ ರಿಪೋರ್ಟ್ ಹಾಕುವ ಕೇಸ್ನಲ್ಲಿ ಬಿಎಸ್‌ವೈ ಬಂಧನ ಯತ್ನ, ನಿಮಗೆ ದೊಡ್ಡ ನಷ್ಟವಾಗಲಿದೆ: ಕಾಂಗ್ರೆಸ್ಗೆ ಸಿಟಿ ರವಿ ಟಾಂಗ್ - CT Ravi Press Meet