ಬೆಂಗಳೂರು:ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಗೆ ಚುನಾವಣೆ ನಡೆಸುವುದು ಬೇಡ, ಸರ್ಕಾರ, ರಾಜ್ಯ ಚುನಾವಣಾ ಆಯೋಗ ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಸೇರಿ ತಮ್ಮನ್ನೇ ಮಧ್ಯಂತರ ಮೇಯರ್ ಆಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿಕೊಳ್ಳಲು ನಿರ್ದೇಶನ ನೀಡಬೇಕೆಂದು ಎಂದು ಕೋರಿ ವ್ಯಕ್ತಿಯೊಬ್ಬರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ನಗರದ ಲ್ಯಾವೆಲ್ಲೆ ರಸ್ತೆಯ ನಿವಾಸಿ 66 ವರ್ಷದ ಮುರಳಿ ಕೃಷ್ಣ ಬ್ರಹ್ಮಾನಂದಂ ಎಂಬುವರು 2022ರಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅದು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಅರ್ಜಿಯನ್ನು ವಿಚಾರಣೆಗೆ ಕರೆದಾಗ ಅರ್ಜಿದಾರರು ಹಾಜರು ಇರಲಿಲ್ಲ. ಅಂತೆಯೇ ಹಿಂದಿನ ಯಾವ ವಿಚಾರಣೆಗೂ ಅರ್ಜಿದಾರ ಹಾಜರಾಗಿರಲಿಲ್ಲ. ಮಂಗಳವಾರ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಅರ್ಜಿಯಲ್ಲಿನ ಅಂಶಗಳು ಮತ್ತು ಮನವಿ ಅಸಂಬಂದ್ಧವಾಗಿದ್ದು, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸದೇ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇಲ್ಲ ನಾವು ಅರ್ಜಿಯನ್ನು ವಜಾ ಮಾಡುವುದಿಲ್ಲ, ಅರ್ಜಿ ಸಲ್ಲಿಸಿದ ಮಹಾನುಭಾವ ಯಾರು ಎಂದು ನೋಡಬೇಕಿದೆ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು.
ಬಿಬಿಎಂಪಿ ಚುನಾವಣೆ ವಿಳಂಬವಾಗಿರುವುದು, ವಾರ್ಡ್ ಮರುವಿಂಗಡಣೆ, ಬಿಬಿಎಂಪಿ ಕಾಯ್ದೆ-2020 ಇದೆಲ್ಲವೂ ಅವೈಜ್ಞಾನಿಕವಾಗಿದೆ ಎಂದು ದೂರಿರುವ ಅರ್ಜಿದಾರರು ಆ ಸಿಟ್ಟಿನಲ್ಲಿ ಈ ಅರ್ಜಿ ಸಲ್ಲಿಸಿದ್ದಂತಿದ್ದು, ಅರ್ಜಿಯಲ್ಲಿನ ಅಂಶಗಳನ್ನು ಗಮನಿಸಿದರೆ ಅದರಲ್ಲಿ ವ್ಯಂಗ್ಯ, ಸಿಡುಕು, ಟೀಕೆ ಮತ್ತು ಅಸಂಬದ್ಧತೆ ಕಾಣಸಿಗುತ್ತದೆ.
ಬಿಬಿಎಂಪಿಗೆ ನೇರವಾಗಿ ಜನರಿಂದ ಮೇಯರ್ ಅವರನ್ನು ಆಯ್ಕೆ ಮಾಡಬೇಕು ಎಂಬ ಬೇಡಿಕೆ 2018ರಲ್ಲಿ ಸಾರ್ವಜನಿಕರಿಂದ ಬಂದಿತ್ತು. ಬಿಬಿಎಂಪಿ, ಬಿಎಂಟಿಸಿ, ಬಿಎಂಆರ್‌ಸಿಎಲ್, ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತಿತರ ಸಂಸ್ಥೆಗಳ ಕಾರ್ಯವ್ಯಾಪ್ತಿಯನ್ನು ಮೇಯರ್ ಹೊಂದಿರಬೇಕು. ಬೆಂಗಳೂರು ಅಭಿವೃದ್ಧಿ ಸಚಿವ ಅನ್ನುವುದು ಅಸಂವಿಧಾನಿಕ. ಅದು ಒಂದು ರೀತಿಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ‘ಕರ್ನಾಟಕದ ಸಚಿವ’ ಎಂಬಂತಾಗಲಿದೆ. ನನ್ನ ಮನವಿ ಅಸ್ಪಷ್ಟವೂ ಅಲ್ಲ, ಅವೈಜ್ಞಾನಿವೂ ಅಲ್ಲ, ಕಾನೂನುಬಾಹಿರವೂ ಅಲ್ಲ, ದುರದ್ದೇಶಪೂರಿತವೂ ಅಲ್ಲ. ಆದ್ದರಿಂದ ಬಿಬಿಎಂಪಿಗೆ ಚುನಾವಣೆ ನಡೆಸಬಾರದೆಂದು ಸರ್ಕಾರ, ಚುನಾವಣಾ ಆಯೋಗ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು. ಜತೆಗೆ ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಸೇರಿ ತಮ್ಮನ್ನು ಮಧ್ಯಂತರ ಮೇಯರ್ ಆಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿಕೊಳ್ಳಲು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.
2023ರ ವಿಧಾನಸಭೆ ಚುನಾವಣೆ ವೇಳೆಯೂ ಇಂತಹದ್ದೇ ಅರ್ಜಿ ಸಲ್ಲಿಸಿದ್ದ ಇದೇ ಅರ್ಜಿದಾರರು, ವಿಧಾನಸಭೆ ಚುನಾವಣೆ ನಡೆಸದೆ, ತಮ್ಮನ್ನೇ ಕರ್ನಾಟಕ ಪ್ರತಿನಿಧಿಯನ್ನಾಗಿ ನೇಮಕ ಮಾಡುವಂತೆ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು.
ಇದನ್ನೂ ಓದಿ:ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸಲು ತಯಾರಿ: ಡಿ.ಕೆ.ಶಿವಕುಮಾರ್ - D K Shivakumar