ದಾವಣಗೆರೆ: ಸಿದ್ದರಾಮಯ್ಯ ಬಜೆಟ್ಗೆ ಜನರಿಂದ ಪರ - ವಿರೋಧ ಅಭಿಪ್ರಾಯ ದಾವಣಗೆರೆ:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ 2024-25ನೇ ಸಾಲಿನ ಬಜೆಟ್ ಕುರಿತು ದಾವಣಗೆರೆ ಜನರು 'ಈಟಿವಿ ಭಾರತ' ಜೊತೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ರಾಜ್ಯ ಬಜೆಟ್ ಬಗ್ಗೆ ರೈತರು ಕಿಡಿಕಾರಿದರೆ, ಕೆಲವು ಜನಸಾಮಾನ್ಯರು ಸ್ವಾಗತಿಸಿದರು.
ರೈತ ಮುಖಂಡ ಬಲ್ಲುರು ರವಿಕುಮಾರ್ ಪ್ರತಿಕ್ರಿಯಿಸಿ, "ಸಿದ್ದರಾಮಯ್ಯ ಅವರು 3,71,383 ಕೋಟಿ ವೆಚ್ಚದಲ್ಲಿ ಬಜೆಟ್ ಮಾಡಿದ್ದಾರೆ. ನಾವು ಮೂರನೇ ಒಂದು ಭಾಗ ನಾವು ಕೇಳಿದ್ದೆವು. ಆದರೆ ನೀವು 32 ಸಾವಿರ ಕೋಟಿ ರೂಪಾಯಿ ಮಾತ್ರ ರೈತರಿಗೆ ಕೊಟ್ಟಿದ್ದೀರಿ. ಇದು ಒಂದು ರೀತಿ ರಾಕ್ಷಸನ ಕೈಯಲ್ಲಿ ಹಪ್ಪಳ ಕೊಟ್ಟಂತೆ ಆಗಿದೆ. ಕೃಷಿ ಎಂಎಸ್ಪಿ ಜಾರಿ ಮಾಡಲಿಲ್ಲ, ನೀರಾವರಿ ಇಲಾಖೆಯ ಕಾಲುವೆಗಳಿಂದ ನೀರು ಕೊಡಲಿಲ್ಲ. ಆ ಕಾಲುವೆಗಳಲ್ಲಿ ಜಾಲಿಮುಳ್ಳು ಬೆಳೆದಿವೆ. ಇದಕ್ಕಾಗಿ 32 ಸಾವಿರ ಕೋಟಿ ಮೀಸಲಿಡಬೇಕಿತ್ತು'' ಎಂದು ಹೇಳಿದರು.
''ರಾಜ್ಯದಲ್ಲಿ ಹಸಿವು, ಬಡತನ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿವೆ. ಪಕ್ಕದ ರಾಜ್ಯದ ಆಂಧ್ರ ಪ್ರದೇಶ ಸರ್ಕಾರವು ರೈತರಿಗೆ ತುಂಬಾ ಅನುದಾನ ಘೋಷಣೆ ಮಾಡಲಾಗಿದೆ. ಇಲ್ಲಿ ನೋಡಿದ್ರೇ ಉಪ್ಪಿನಕಾಯಿ ರೀತಿಯಲ್ಲಿ ರೈತರಿಗೆ ಅನುದಾನ ಕೊಡಲಾಗಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಸಿಎಂ ಸಿದ್ದರಾಮಯ್ಯ ಕೈಯಲ್ಲಿ ಆಗಲಿಲ್ಲ. ರೈತರ ಮಕ್ಕಳು ಕೆಲಸ ಅರಸಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ಈ ಬಗ್ಗೆ ಯಾವುದೇ ಕ್ರಮವಹಿಸಲಿಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಮುಖಂಡ ಹರೀಶ್ ಎಸ್.ಎಂ ಮಾತನಾಡಿ, "ಸಿದ್ದರಾಮಯ್ಯ ಅವರ ಮಂಡನೆ ಮಾಡಿರುವ ಬಜೆಟ್ಗೆ ಸ್ವಾಗತರ್ಹ. ಈ ಬಾರಿಯ ಬಜೆಟ್ ಉತ್ತಮವಾಗಿದೆ. ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಹಾಗೂ ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ಈ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ಯೋಜನೆ ಘೋಷಣೆ, ವೃದ್ಧರಿಗಾಗಿ ಮನೆಗೆ ಪಡಿತರ ತಲುಪಿಸುವ ಅನ್ನ ಸುವಿಧಿ ಯೋಜನೆ, ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿರುವುದು ಖುಷಿ ತಂದಿದೆ. ಶಿಕ್ಷಣ, ಆರೋಗ್ಯ ಇಲಾಖೆ ಹಾಗೂ ಶ್ರಮಿಕರ ವರ್ಗಕ್ಕೆ ಹಣ ಮೀಸಲಿಟ್ಟಿರುವುದು ಸಂತಸದ ವಿಚಾರ. ಇನ್ನು ಮಾಜಿ ದೇವಾದಾಸಿಯರಿಗೆ ನೀಡುವಂತ ಮಾಸಿಕ ವೇತನ ಹೆಚ್ಚಳ ಮಾಡಿರುವುದು ಸಂತಸ ತಂದಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೆಡಿಕಲ್ ಕಾಲೇಜಿಗೆ 500 ಕೋಟಿ ರೂಪಾಯಿ:ಯುವ ಮುಖಂಡ ಹರೀಶ್ ಹೆಚ್. ಪ್ರತಿಕ್ರಿಯಿಸಿ, "ರಾಜ್ಯ ಬಜೆಟ್ ಶ್ರಮಿಕರ ವರ್ಗ, ಅಂಗನವಾಡಿ ಕಾರ್ಯಕರ್ತೆಯರಿಗೆ ಬಂಪರ್ ಕೊಡುಗೆ ನೀಡಿದೆ. ಶಿಕ್ಷಣಕ್ಕೆ ಮೊದಲನೇ ಸ್ಥಾನ ನೀಡಲಾಗಿದೆ. ಆರೋಗ್ಯ, ಶಿಕ್ಷಣ ಇಲಾಖೆಗೆ ಆದ್ಯತೆ ನೀಡಿದ್ದು, ಸಹಕಾರಿ ವಲಯದಲ್ಲಿ ಪ್ರತ್ಯೇಕವಾದ ನಿಗಮಗಳನ್ನು ಮಾಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ, ಈ ಬಾರಿಯ ಬಜೆಟ್ ಶಕ್ತಿಶಾಲಿ ಬಜೆಟ್ ಆಗಿದೆ. ಇನ್ನು ಪಕ್ಕದ ಜಿಲ್ಲೆ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ 500 ಕೋಟಿ ರೂ. ಮೀಸಲಿಡಲಾಗಿದೆ. ಬಡವರ್ಗದ ಮಕ್ಕಳು ಮೆಡಿಕಲ್ ಕಾಲೇಜು ಸೇರಿ ವ್ಯಾಸಂಗ ಮಾಡಿ ಉನ್ನತ ಹುದ್ದೆ ಪಡೆಯಲು ಸಹಾಯವಾಗಲಿದೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮೂಲ ಸೌಲಭ್ಯಕ್ಕೆ, ಕೈಗಾರಿಕೆಗೆ ಅನುದಾನ ಸಾಲದು, ಸಿದ್ದರಾಮಯ್ಯ ಬಜೆಟ್ ಅವೈಜ್ಞಾನಿಕ: ಉದ್ಯಮಿ ಶಿವಕುಮಾರ್