ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತೆಯ ಅಶ್ಲೀಲ ವಿಡಿಯೋ ಹಂಚಿಕೆ ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧದ ತನಿಖೆಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ತನಿಖಾಧಿಕಾರಿಗಳು ತಮ್ಮ ವಿವೇಚನೆಯಂತೆ ಪ್ರಕರಣದ ತನಿಖೆ ನಡೆಸಬಹುದು. ಆದರೆ, ಬಂಧಿಸುವಂತಿಲ್ಲ ಎಂದು ತಿಳಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಪ್ರೀತಂಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯತನಕ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಬಹುದು. ವಿಚಾರಣಾಧಿಕಾರಿಗಳು ಕರೆದಾಗೆಲ್ಲ ಹಾಜರಾಗಬೇಕು. ಈ ವೇಳೆ ಪೊಲೀಸರು ಅವರನ್ನು ಬಂಧಿಸುವಂತಿಲ್ಲ, ವಶಕ್ಕೆ ಪಡೆದುಕೊಳ್ಳುವಂತಿಲ್ಲ. ಆದರೆ, ತನಿಖೆಗೆ ಅಗತ್ಯವೆನಿಸಿದರೆ ಆರೋಪಿಗಳ ಮೊಬೈಲ್ ಫೋನ್ ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಬಹುದು ಎಂದೂ ಪೀಠ ತಿಳಿಸಿದೆ.
ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಹಾಗೂ ದೂರುದಾರೆಗೆ ನೋಟಿಸ್ ಜಾರಿ ಮಾಡಿ ಹೈಕೋರ್ಟ್ ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಕಿರಣ್, ಶರತ್ ಹಾಗೂ ಪ್ರೀತಂಗೌಡ ವೈರಲ್ ಮಾಡಿಸುತ್ತಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ನಿರ್ದಿಷ್ಟವಾಗಿ ಅರ್ಜಿದಾರರೇ ಮಾಡಿದ್ದಾರೆ ಎಂದು ನೇರವಾಗಿ ಹೇಳಿಲ್ಲ. ಹಾಗಾಗಿ, ಈ ಪ್ರಕ್ರಿಯೆಯಲ್ಲಿ ಅರ್ಜಿದಾರರ ಪಾತ್ರವೂ ಇಲ್ಲ, ಅವರು ಭಾಗಿಯಾಗಿಯೂ ಇಲ್ಲ. ಇದೊಂದು ರಾಜಕೀಯ ಸೇಡು, ಅರ್ಜಿದಾರರನ್ನು ರಾಜಕೀಯವಾಗಿ ಬೇಟೆಯಾಡಲು ಈ ಪ್ರಕರಣವನ್ನು ಬಳಸಿಕೊಳ್ಳಲಾಗಿದೆ. ಇಂತಹದ್ದಕ್ಕೆಲ್ಲ ಕಡಿವಾಣ ಹಾಕಬೇಕು. ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್, ಪ್ರಕರಣ ದಾಖಲಾಗಿ 20 ದಿನ ಆಗಿದೆ. ಈಗ ಅರ್ಜಿದಾರರು ಏಕಾಏಕಿ ನ್ಯಾಯಾಲಯದ ಮುಂದೆ ಬಂದಿರುವುದು ಅಚ್ಚರಿ ತಂದಿದೆ. ಈಗಷ್ಟೇ ಪ್ರಕರಣದ ದಾಖಲೆಗಳನ್ನು ನಮಗೆ ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ. ತನಿಖಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಆಕ್ಷೇಪಣೆ ಸಲ್ಲಿಸಬೇಕಿದೆ. ಮೊದಲು ಸರ್ಕಾರ, ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಯಾಗಲಿ, ಪ್ರತಿಕ್ರಿಯೆ ನೀಡಲು ಪ್ರಾಸಿಕ್ಯೂಷನ್ ಸಮರ್ಥವಾಗಿದೆ. ಇದು ರಾಜಕೀಯ ಸೇಡು ಎಂದು ಅರ್ಜಿದಾರರ ಪರ ವಕೀಲರು ಆರೋಪಿಸುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ರಾಜಕೀಯ ಸೇಡಿನ ಪ್ರಶ್ನೆ ಎಲ್ಲಿಂದ ಬರುತ್ತದೆ?. ಪ್ರಕರಣದ ತನಿಖೆ ನಡೆಯಬೇಕಿದೆ, ಹಾಗಾಗಿ, ಪ್ರಕರಣ ರದ್ದುಪಡಿಸುವುದಾಗಲಿ, ತಡೆ ನೀಡುವುದಾಗಲಿ ನ್ಯಾಯಾಲಯ ಮಾಡಬಾರದು ಎಂದು ಮನವಿ ಮಾಡಿದರು.