ಹಾಸನ: ಮುಂದಿನ ದಿನಗಳಲ್ಲಿ ಹಾಸನಾಂಬ ಜಾತ್ರೆಯನ್ನು ಇನ್ನೂ ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುರುವಾರದಂದು ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಪ್ರತಿಕ್ರಿಯಿಸಿದರು.
ನಮಗೆ ದೇವಿ ದರ್ಶನ ಭಾಗ್ಯ ದೊರಕಿರುವುದು ಪುಣ್ಯ ಎಂದು ಭಾವಿಸುತ್ತೇನೆ. ನಾಡಿನ ಜನ ಸಮುದಾಯಕ್ಕೆ ಶಾಂತಿ ನೀಡುವಂತೆ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. 4-5 ವರ್ಷದ ಹಿಂದೆ ಬಂದು ದೇವಿಯ ದರ್ಶನ ಪಡೆದಿದ್ದೆ. ನಾವೆಲ್ಲರೂ ತಾಯಿಯನ್ನ ಭಕ್ತಿಯಿಂದ ಪೂಜೆ ಮಾಡುತ್ತೇವೆ. ಮೂರು ವರ್ಷದ ಹಿಂದೆ ಇದ್ದ ಭಕ್ತರ ಸಂಖ್ಯೆ ಇಂದು ಮೂರು ಪಟ್ಟು ಹೆಚ್ಚಿದೆ. ಪ್ರತಿ ದಿನ ಲಕ್ಷಾಂತರ ಮಂದಿ ದೇವಿ ದರ್ಶನ ಪಡೆಯುತ್ತಿದ್ದಾರೆ. ಜನರು ಆತ್ಮವಿಶ್ವಾಸ, ನಂಬಿಕೆಯಿಂದ ಹಿಂದೂ ಸಂಪ್ರದಾಯದಂತೆ ಭಕ್ತಿ ಇಟ್ಟುಕೊಂಡಿದ್ದಾರೆ. ರಾಜ್ಯ ಅಲ್ಲದೆ ಪಕ್ಕದ ರಾಜ್ಯದಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಹಾಸನಾಂಬ ದರ್ಶನ ಪಡೆಯುತ್ತಿದ್ದಾರೆ ಎಂದರು. ವಿಶೇಷವಾಗಿ ಮಹಿಳೆಯರು ಮಕ್ಕಳೊಂದಿಗೆ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದನ್ನು ನೋಡಿಕೊಂಡು ಬಂದೆ. ಈ ಬಾರಿ ಮೂರು ಪಟ್ಟು ಹೆಚ್ಚು ಜನ ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರು.
ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವುದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದರು. ಸಣ್ಣಪುಟ್ಟ ಘಟನೆ ನಡೆಯೋದು ಸಹಜ. ಮೂರು ದಿನಗಳು ದರ್ಶನಕ್ಕೆ ಬಾಕಿ ಇದ್ದು, ಸೂಕ್ತ ಬಂದೋಬಸ್ತ್ ಮಾಡಲು ಐಜಿ ಅವರಿಗೆ ಸೂಚನೆ ಕೊಟ್ಟಿದ್ದೇನೆ. ಭಕ್ತರಿಗೆ ನಿರಾಸೆ ಆಗದಂತೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಇದೆ ವೇಳೆ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಮತ್ತಿತರರು ಹಾಜರಿದ್ದರು.
ದೇವಿ ದರ್ಶನ ಪಡೆದ ರೇವಣ್ಣ ದಂಪತಿ:ಹಾಸನಾಂಬೆ ದೇವಿಯ ದರ್ಶನ ಪಡೆದ ಹೆಚ್.ಡಿ. ರೇವಣ್ಣ ಮತ್ತು ಭವಾನಿ ರೇವಣ್ಣ ಅವರು ಬಳಿಕ ದರ್ಬಾರ್ ಗಣಪತಿ ಹಾಗೂ ಶ್ರೀ ಸಿದ್ದೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. "ದೇವಿ ದರ್ಶನ ಪಡೆದು ದೇವೇಗೌಡ, ಚೆನ್ನಮ್ಮನವರಿಗೆ ಆಶೀರ್ವಾದ ಬೇಡಿದ್ದೇನೆ. ರಾಜ್ಯದಲ್ಲಿ ಮಳೆಯಿಂದ ರೈತರಿಗೆ ಹಾನಿಯಾಗಿ ಜಿಲ್ಲೆಗಳಲ್ಲಿ ಹಲವಾರು ರೈತರ ಬೆಳೆ ನಾಶವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ, ಕೂಡಲೇ ಸರ್ಕಾರ ಅದನ್ನು ಬಗೆಹರಿಸಬೇಕೆಂದು ತಾಯಿಯಲ್ಲಿ ಕೇಳಿದ್ದೇನೆ ಎಂದರು.
ಪೊಲೀಸ್-ಕಂದಾಯ ಇಲಾಖೆ ವಿರುದ್ಧ ನಗರಸಭೆ ಸದಸ್ಯರ, ಪೌರಕಾರ್ಮಿಕರ ಪ್ರತಿಭಟನೆ, ಲಘು ಲಾಠಿ ಪ್ರಹಾರ:ನಿತ್ಯ ಹಾಸನಾಂಬೆ ದೇವಾಲಯದ ಸುತ್ತ ಸ್ವಚ್ಛತೆಗೊಳಿಸುವ ಪೌರಕಾರ್ಮಿಕರಿಗೆ ದರ್ಶನ ಮಾಡಲು ಅವಕಾಶ ನೀಡಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಹಾಗೂ ಮಾಜಿ ಅಧ್ಯಕ್ಷ ಆರ್. ಮೋಹನ್ ನೇತೃತ್ವದಲ್ಲಿ ನಗರಸಭೆ ಸದಸ್ಯರು ಹಾಗೂ ನೌಕರರು ಮುಖ್ಯದ್ವಾರದ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.