ಧಾರವಾಡ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಸೇರಿ ರಾಜ್ಯಾದ್ಯಂತ ಪಂಚಮಸಾಲಿ ಸಮಾಜ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದೆ.
ಧಾರವಾಡ-ಗೋವಾ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು. ಲಾಠಿ ಬೀಸುವ ಮೂಲಕ ಪಂಚಮಸಾಲಿ ಸಮಾಜದ ಮೇಲೆ ದಬ್ಬಾಳಿಕೆ ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲಹೊತ್ತು ಧಾರವಾಡ-ಗೋವಾ ಸಂಚಾರ ಬಂದ್ ಆಗಿ ವಾಹನ ಸವಾರರು ಪರದಾಡಿದರು. ಕೊನೆಗೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು. ಪೊಲೀಸರ ಮನವೊಲಿಕೆಯ ಬಳಿಕ ಪಂಚಮಸಾಲಿ ಮುಖಂಡರು ಪ್ರತಿಭಟನೆ ವಾಪಸ್ ಪಡೆದುಕೊಂಡರು.
ರಾಜ್ಯದ ಹಲವೆಡೆ ಪಂಚಮಸಾಲಿ ಮೀಸಲಾತಿ ಪ್ರತಿಭಟನೆ (ETV Bharat) ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, "ನಮ್ಮ ಬೇಡಿಕೆ ಸಂವಿಧಾನ ಬದ್ಧವಾಗಿದೆ. ಹೋರಾಟದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಮೀಸಲಾತಿ ಪಡೆದೇ ತೀರುತ್ತೇವೆ" ಎಂದು ಹೇಳಿದರು.
"ಈಗ ಇವರು ಕೊಡದಿದ್ದರೇನಂತೆ ಮುಂದೆ ಇನ್ನೊಬ್ಬ ಸಿಎಂ ಬರ್ತಾರೆ. ಅವರಿಂದಾನೇ ನಾವು ಮೀಸಲಾತಿ ಪಡೆಯುತ್ತೇವೆ. ಸಂವಿಧಾನಬದ್ಧವಾಗಿ ನಮ್ಮ ಬೇಡಿಕೆ ಇದೆ. ಅಂಬೇಡ್ಕರ್ ಇವರದಷ್ಟೇ ಸ್ವತ್ತಲ್ಲ. ಅಂಬೇಡ್ಕರ್ ನಮಗೂ ಅನ್ವಯ ಆಗುತ್ತಾರೆ. ನಮ್ಮ ಹೋರಾಟ ನಿಲ್ಲದು" ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿಯಲ್ಲಿ ಪಂಚಮಸಾಲಿ ಮುಖಂಡರ ಪ್ರತಿಭಟನೆ: ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಮೀಸಲಾತಿ ಕೇಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಮೇಲೆ ಸಿಎಂ ಸಿದ್ದರಾಮಯ್ಯ ಲಾಠಿಚಾರ್ಜ್ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟ ಹತ್ತಿಕ್ಕಲು ದೌರ್ಜನ್ಯ ಎಸಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕೂಡಲ ಮತ್ತು ಹರಿಹರ ಪಂಚಮಸಾಲಿ ಪೀಠದ ಶ್ರೀಗಳಿಗೆ ಜಯಕಾರ ಕೂಗಿದ ಪ್ರತಿಭಟನಾಕಾರರು ನ್ಯಾಯ ಸಿಗುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು. ಘಟನೆ ಖಂಡಿಸಿ ಹಾವೇರಿ ತಹಶೀಲ್ದಾರ್ಗೆ ಮನವಿ ನೀಡಿದ ಪಂಚಮಸಾಲಿಗಳು ಮೀಸಲಾತಿ ನೀಡುವಂತೆ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ರಸ್ತೆ ತಡೆದು ಪ್ರತಿಭಟನೆ:ಹುಬ್ಬಳ್ಳಿಯಲ್ಲಿ ಕರ್ನಾಟಕ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶ್ರೀನಗರ ಕ್ರಾಸ್ ಬಳಿಯಲ್ಲಿ ಪಂಚಮಸಾಲಿ ಮುಖಂಡರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸಿದ್ದು ಖಂಡನೀಯ. ಪಂಚಮಸಾಲಿ ಮೀಸಲಾತಿ ಬೇಕೇ ಬೇಕು ಎಂದು ಆಗ್ರಹಿಸಿದರು.
ಶಂಕರ್ ಪಾಟೀಲ್ ಮುನೇನಕೊಪ್ಪ ಮಾತನಾಡಿ, "ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಸರ್ಕಾರ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಲ್ಲ. ಲಾಠಿ ಚಾರ್ಜ್ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಮುಗ್ಧ ಜನರ ಮೇಲೆ ಹಾಕಿದ ಪ್ರಕರಣಗಳನ್ನು ವಾಪಾಸ್ ಪಡೆಯಬೇಕು. ಇಲ್ಲವಾದಲ್ಲಿ ಲಾಠಿ ಚಾರ್ಜ್ ಮಾಡಿದ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ" ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ:ಪಂಚಮಸಾಲಿ ಸಮಾಜದ ಮುಖಂಡರು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಕುಮಾರ್, ಬೆಳಗಾವಿ ಕಮಿಷನರ್ ಯಡಾ ಮಾರ್ಟಿನ್ ಇಬ್ಬರು ಸೇರಿ ಸಮಾಜದವರ ಮೇಲೆ ಲಾಠಿ ಬೀಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಜಯದೇವ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಆಶೋಕ ರಸ್ತೆ, ಗಾಂಧಿ ವೃತ್ತ, ಪಿಬು ವೃತ್ತದಲ್ಲಿ ಸಾಗಿ ಎಸಿ ಕಚೇರಿಗೆ ತಲುಪಿತು. ಹರಿಹರದ ಮಾಜಿ ಶಾಸಕ ಶಿವಶಂಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮುಖಂಡರು ಭಾಗಿಯಾಗಿದ್ದರು.
ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಶಿವಶಂಕರ್ ವಾಗ್ದಾಳಿ:ಘಟನೆ ಸಂಬಂಧ ಹರಿಹರ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಪ್ರತಿಕ್ರಿಯಿಸಿ, "ನಾವು ಎಂಟನೇ ಹಂತದ ಹೋರಾಟ ಮಾಡಿದ್ದೇವೆ. 2ಎ ಮೀಸಲಾತಿ ಕೊಟ್ಟು ಒಬಿಸಿ ಪಟ್ಟಿಗೆ ಸೇರಿಸಲು ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಹಕ್ಕೊತ್ತಾಯ ಮಾಡಿ, ಹೋರಾಟ ಮಾಡಿದ್ದೇವೆ. ನಮ್ಮ ಸಮಾಜದ ವಕೀಲರ, ಮುಖಂಡರ ಹೋರಾಟವನ್ನು ಹತ್ತಿಕ್ಕುವ ದೌರ್ಜನ್ಯವನ್ನು ಸರ್ಕಾರ ಮಾಡಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ್ ಬೆಲ್ಲದ, ಎಲ್ಲರ ಮೇಲೂ ಗಾಯಗಳಾಗಿವೆ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕೇಳಿದ್ದೇವೆ. ಅದರೆ ಈ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲ. ಶಾಂತಿಯುತ ಹೋರಾಟ ಮಾಡುತ್ತಿದ್ದವರ ಮೇಲೆ ಎಡಿಜಿಪಿ ಹಿತೇಂದ್ರ ಕುಮಾರ್, ಯಡಾ ಮಾರ್ಟಿನ್ ಇಬ್ಬರು ಲಾಠಿ ಚಾರ್ಜ್ ಮಾಡಿದ್ದಾರೆ. ಸಹಾನುಭೂತಿಯಿಂದ ಹೋರಾಟ ಮಾಡುವ ಸ್ವಾಮೀಜಿ ಮತ್ತು ಮುಖಂಡರ ಹೋರಾಟಕ್ಕೆ ಮಣಿದು ಸರ್ಕಾರ ಬೆಂಬಲ ಕೊಡಬೇಕಾಗಿತ್ತು. ಸಮಾಜದ ಹರಿಕಾರ, ದೇವರಾಜ್ ಅರಸು ಎನ್ನುತ್ತಿರುವ ಸಿಎಂ ಒಂದು ಸಭೆ ಕರೆದು ಆಶ್ವಾಸನೆ ಕೊಡುವ ಕೆಲಸ ಮಾಡಲಿಲ್ಲ. ಮೀಸಲಾತಿ ಕೊಡುತ್ತೀರಾ ಇಲ್ವಾ? ಎಂಬುದನ್ನು ಸ್ಪಷ್ಟಪಡಿಸಿ. ನಾವು ನಮ್ಮ ದಾರಿ ನೋಡಿಕೊಳ್ಳುತ್ತೇವೆ" ಎಂದರು.
ಇದನ್ನೂ ಓದಿ:ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿದ ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್