ಕರ್ನಾಟಕ

karnataka

ETV Bharat / state

ಒಂದೆಡೆ ಬರ, ಮತ್ತೊಂದೆಡೆ ಭದ್ರಾ ನೀರಿಲ್ಲ: ಆಟದ ಮೈದಾನಗಳಂತೆ ಕಾಣುತ್ತಿವೆ ಭತ್ತದ ಗದ್ದೆಗಳು - Drought

ರಾಜ್ಯದೆಲ್ಲೆಡೆ ಬರ ತಾಂಡವವಾಡುತ್ತಿದೆ. ಮಹಾನಗರಗಳೂ ಸೇರಿದಂತೆ ಅನೇಕ ಸ್ಥಳಗಳಲ್ಲಿ ಕುಡಿಯಲು ನೀರಿಲ್ಲ. ಭತ್ತದ ಕಣಜವೆಂದೇ ಕರೆಸಿಕೊಳ್ಳುವ ದಾವಣಗೆರೆಯಲ್ಲಿ ರೈತರು ಈ ಬಾರಿ ಭತ್ತ ಬೆಳೆಯಲು ಹಿಂದೇಟು ಹಾಕುವಂತಾಗಿದೆ.

Paddy fields become playgrounds
ಆಟದ ಮೈದಾನಗಳಾದ ಭತ್ತದ ಗದ್ದೆಗಳು

By ETV Bharat Karnataka Team

Published : Apr 4, 2024, 6:29 PM IST

Updated : Apr 5, 2024, 9:04 AM IST

ದಾವಣಗೆರೆಯಲ್ಲಿ ಭತ್ತ ಬೆಳೆಯಲು ರೈತರು ಹಿಂದೇಟು

ದಾವಣಗೆರೆ:ಬೆಣ್ಣೆ ನಗರಿ ದಾವಣಗೆರೆ 'ಭತ್ತದ ಕಣಜ' ಎಂದು ಹೆಸರಾದ ಜಿಲ್ಲೆ. ಇಲ್ಲಿನ ಭದ್ರಾ ಅಚ್ಚುಕಟ್ಟಿನ ಪ್ರದೇಶದಲ್ಲಿ 1.60 ಲಕ್ಷ ಹೆಕ್ಟೇರ್​ನಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಒಂದೆಡೆ ಬರಗಾಲ ಇನ್ನೊಂದೆಡೆ ಭದ್ರಾ ನೀರಿಲ್ಲದೆ ರೈತರು ಭತ್ತ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಒಣಗಿದ ಮೈದಾನಗಳಂತೆ ಕಾಣುತ್ತಿವೆ.

ಹೌದು, ಬರಗಾಲ ದಾವಣಗೆರೆ ರೈತರ ಬದುಕನ್ನು ಬರಡು ಮಾಡಿದೆ. ಬರದ ತೀವ್ರತೆ ದಿನೇ ದಿನೇ ಹೆಚ್ಚುತ್ತಿದೆ. ಮುಂಗಾರು, ಹಿಂಗಾರಿನ ಜತೆ ಈ ವರ್ಷ ಬೇಸಿಗೆಯ ಹಂಗಾಮು ಬಿತ್ತನೆಯೂ ನೆನೆಗುದಿಗೆ ಬಿದ್ದಿದೆ. ಬೇಸಿಗೆಯ ದಿನಗಳಲ್ಲಿ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುತ್ತಿದ್ದ ಬೆಳೆ ಈಗ ನೂರಾರು ಹೆಕ್ಟೇರ್‌ಗೆ ಕುಸಿದಿದೆ. ಪ್ರತಿ ಬಾರಿ ಜಿಲ್ಲೆಯಲ್ಲಿ 1.60 ಲಕ್ಷ ಹೆಕ್ಟೇರ್​ನಲ್ಲಿ ಭತ್ತವನ್ನು ಬೆಳೆಯಲಾಗುತ್ತಿತ್ತು. ಈ ವರ್ಷ ಕೇವಲ 695 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೋರ್​ವೆಲ್ ನೀರಿನಲ್ಲಿ ರೈತರು ಭತ್ತ ಬೆಳೆದಿದ್ದಾರೆ.

ಅಕ್ಕಿ ಬೆಲೆ ಮೇಲೆ ಪರಿಣಾಮ ಸಾಧ್ಯತೆ:"ಈ ಬಾರಿ ಭದ್ರಾ ನೀರು ಸರಿಯಾಗಿ ಹಂಚಿಕೆ ಮಾಡಿದ್ದರೆ ರೈತರು 50 ಸಾವಿರ ಇಲ್ಲವೆಂದರೆ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಿದ್ದರು. ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಕುಡಿಯುವ ನೀರು ಹರಿಸಿದ ಪರಿಣಾಮ ರೈತರ ಕೃಷಿಗೆ ನೀರಿಲ್ಲ. ಭದ್ರಾ ನೀರು ಹರಿಸುವ ನಿರ್ವಹಣೆಯಲ್ಲಿ ಸರಿಯಾದ ಕ್ರಮವಾಗಿಲ್ಲ. ದಾವಣಗೆರೆ ಜಿಲ್ಲೆಯಲ್ಲೇ ಒಟ್ಟು ನಾಲ್ಕೂವರೆ ಸಾವಿರ ಮೆಟ್ರಿಕ್ ಟನ್ ಭತ್ತ ಬೆಳೆಯಲಾಗುತ್ತಿತ್ತು. ಈ ಬಾರಿ ರೈತರು ಭತ್ತ ಬೆಳೆಯಲು ಹಿಂದೇಟು ಹಾಕಿರುವುದರಿಂದ ಇದೀಗ ಭತ್ತದ ಕೊರತೆಯಾಗಿದೆ. ಇದು ಅಕ್ಕಿ ಬೆಲೆ ಮೇಲೆ ಪರಿಣಾಮ ಬೀರಲಿದೆ" ಎಂದು ರೈತ ಮುಖಂಡ ಗಣೇಶಪ್ಪ ತಿಳಿಸಿದರು.

"ಈ ಬಾರಿ ಯಾರೂ ಹೆಚ್ಚು ಭತ್ತ ಬೆಳೆದಿಲ್ಲ. ಕೊಳವೆಬಾವಿ ಇರುವವರು ಮಾತ್ರ ಸ್ವಲ್ಪ ಭತ್ತವನ್ನು ಬೆಳೆದಿದ್ದಾರೆ. ಭದ್ರಾ ಅಚ್ಚುಕಟ್ಟಿನ ರೈತರಿಗೆ ನೀರು ಕೊಟ್ಟಿದ್ದರೆ ನಾಲ್ಕೂವರೆ ಸಾವಿರ ಮೆಟ್ರಿಕ್ ಟನ್ ಭತ್ತ ಬೆಳೆಯಬಹುದಿತ್ತು. ಕುಡಿಯುವ ನೀರಿಗಾಗಿ ನದಿಗೆ ಹತ್ತು ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ‌. ಈ ನೀರನ್ನು ಭದ್ರಾ ಅಚ್ಚುಕಟ್ಟಿನ ರೈತರಿಗೆ ಕೊಟ್ಟಿದ್ದರೆ ಭತ್ತ ಬೆಳೆಯುತ್ತಿದ್ದರು. ಒಂದು ತಿಂಗಳು ನೀರು ಕೊಡುವುದು 20 ದಿನ ನೀರು ಬಂದ್ ಮಾಡುವುದು ಮಾಡಿದರೆ ಕೊನೇ ಭಾಗದ ರೈತರಿಗೆ ನೀರು ತಲುಪುತ್ತಿತ್ತು" ಎಂದು ಅವರು ಹೇಳಿದರು.

ಮೈದಾನಗಳಾದ ಭತ್ತದ ಗದ್ದೆಗಳು:"ಒಂದೆಡೆ ನೀರಿನ ಸಮಸ್ಯೆ, ಮತ್ತೊಂದೆಡೆ ಮುನಿಸಿಕೊಂಡ ಮಳೆ, ಇದರಿಂದ ರೈತ ನಲುಗಿ ಹೋಗಿದ್ದಾನೆ. ಇದರ ಪರಿಣಾಮ ಭತ್ತದ ಮೇಲೆ ಬಿದ್ದಿದೆ. ನೀರಿಲ್ಲದೆ ಭತ್ತದ ಗದ್ದೆಗಳು ಒಣಗಿವೆ. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಭದ್ರಾ ಅಚ್ಚುಕಟ್ಟು ಪ್ರದೇಶದ ಕಳೆಗುಂದಿವೆ. ಗದ್ದೆಗಳೆಲ್ಲವೂ ಕ್ರಿಕೆಟ್ ಮೈದಾನಗಳಂತಾಗಿವೆ‌. ಉಡಾಫೆ ಮೇಲೆ ಭದ್ರ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಕೆಳಭಾಗದ ರೈತರಿಗೆ ನೀರು ತಲುಪಿಲ್ಲ. ನೀರು ಸರಿಯಾಗಿ ಹರಿಸಿದ್ದರೆ ಕನಿಷ್ಠ 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆಯುತ್ತಿದ್ದರು. ಭದ್ರಾ ನೀರು ಚನ್ನಗಿರಿ ಭಾಗದ ರೈತರಿಗೆ ತಲುಪಿದೆ. ಆದರೆ ದಾವಣಗೆರೆ ಭಾಗದವರಿಗೆ ಅನ್ಯಾಯ ಆಗಿದೆ. ಇದೀಗ 20% ರಷ್ಟು ರೈತರು ಭತ್ತ ಬೆಳೆದಿಲ್ಲ. ಮಳೆ ಇಲ್ಲದೆ ಈ ಸಮಸ್ಯೆ ಆಗಿದೆ‌. ಭತ್ತದ ಗದ್ದೆಗಳು ಬರಡು ಭೂಮಿಗಳಾಗಿದ್ದು, ಸರ್ಕಾರ ಇತ್ತ ಗಮನಹರಿಸಬೇಕು" ಎಂದು ರೈತ ಭಗತ್ ಸಿಂಹ ಮನವಿ ಮಾಡಿದರು.

ಇದನ್ನೂ ಓದಿ:ಜಿಂಬಾಬ್ವೆಯಲ್ಲಿ ತಲೆದೂರಿದ ಭೀಕರ ಬರ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ ಅಧ್ಯಕ್ಷ - Zimbabwean President Emmerson

Last Updated : Apr 5, 2024, 9:04 AM IST

ABOUT THE AUTHOR

...view details