ಬೆಂಗಳೂರು: "ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ನಟ ದರ್ಶನ್ ಅವರನ್ನು ವಿಚಾರಣೆ ನಡೆಸುತ್ತಿರುವ ಪೊಲೀಸ್ ಠಾಣೆಗೆ 144 ಸೆಕ್ಷನ್ ಹಾಕಿರುವುದು ವೈಯಕ್ತಿಕ ಹಿತಾಸಕ್ತಿ ಮತ್ತು ಓಲೈಕೆಗಾಗಿ. ಇದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ನಿದರ್ಶನ" ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಪೊಲೀಸ್ ಠಾಣೆಗೆ 144 ಸೆಕ್ಷನ್ ಹಾಕುವುದೆಂದರೆ ಪೊಲೀಸ್ ಸ್ಟೇಶನ್ ಅನ್ನು ರಕ್ಷಿಸಲು ಇನ್ನೊಬ್ಬ ಖಾಸಗಿಯವರಿಗೆ ಕೊಟ್ಟಂತೆ. ಮಾಧ್ಯಮದವರನ್ನು ದೂರವಿಡುವ ಉದ್ದೇಶ ಮತ್ತು ಠಾಣೆಯಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಯ ಚಟುವಟಿಕೆ ಮಾಡುವುದಕ್ಕಾಗಿ ಅಥವಾ ಯಾರನ್ನೋ ಓಲೈಕೆಗೆ 144ನೇ ಸೆಕ್ಷನ್ ಬಳಸಿಕೊಳ್ಳುತ್ತಿದ್ದಾರೆ" ಎಂದು ಟೀಕಿಸಿದರು.
"ಜನರಿಗೆ ತನಿಖಾ ಸಂಸ್ಥೆ, ಪೊಲೀಸ್ ಇಲಾಖೆ ಬಗ್ಗೆ ವಿಶ್ವಾಸ ಕಡಿಮೆಯಾಗಬಾರದು. ಇದು ಪೊಲೀಸ್ ಇಲಾಖೆಯ ಗುರುತರ ಜವಾಬ್ದಾರಿ. ಎಸ್‍ಐಟಿ, ಪೊಲೀಸ್ ಠಾಣೆಗಳ ನಡವಳಿಕೆ ಜನರಲ್ಲಿ ವಿಶ್ವಾಸ ಮೂಡಿಸುವಂತೆ ಇರಬೇಕು" ಎಂದರು.
"ಕೊಲೆ ಮಾಡಿದವನು, ಕೊಲೆಗೆ ಸಂಚು ಮಾಡಿದವನು, ಕೊಲೆಗೆ ದುಷ್ಪ್ರೇರಣೆ ನೀಡಿದವನು, ಕೊಲೆ ಪ್ರಕರಣದ ಸಾಕ್ಷಿ ನಾಶ ಮಾಡುವವನು, ಕೊಲೆಯ ಸಾಕ್ಷ್ಯದ ದಿಕ್ಕು ತಪ್ಪಿಸುವವನು- ಈ ಎಲ್ಲಾ ಚಟುವಟಿಕೆಗಳು ಕೊಲೆಯ ಒಳಸಂಚಿನ ಭಾಗವೇ ಆಗುತ್ತದೆ. ಅದು ಒಬ್ಬ ಕೊಲೆಗಾರನ ಹೊಣೆಗಾರಿಕೆಯಷ್ಟೇ ಪ್ರಮುಖ" ಎಂದು ಹೇಳಿದರು.