ದೊಡ್ಡಬಳ್ಳಾಪುರ:ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ದೊಡ್ಡಬಳ್ಳಾಪುರದ ಹೊರವರ್ತುಲ ಹೆದ್ದಾರಿ ನಿರ್ಮಾಣ ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ದೊಡ್ಡಬಳ್ಳಾಪುರ ಹೊರವರ್ತುಲದ ಹೆಸರುಘಟ್ಟದ ವರೆಗಿನ ರಸ್ತೆಯನ್ನು ಏಕಾಏಕಿ ಬಂದ್ ಮಾಡಿದ್ದರಿಂದ 40 ಗ್ರಾಮಗಳಿಗೆ ಸಂಚಾರ ಸಂಪರ್ಕದ ಸಮಸ್ಯೆಯಾಗಿದೆ. ಹೈವೆಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಹೆದ್ದಾರಿ ತಡೆದು ಇಂದು ಪ್ರತಿಭಟನೆ ನಡೆಸಿದರು.
ಅಂಡರ್ ಪಾಸ್ ನಿರ್ಮಾಣ ಮಾಡದಿದ್ದಲ್ಲಿ ಹೋರಾಟ:ದಾಬಸ್ ಪೇಟೆ - ಹೊಸೂರು ರಾಷ್ಟ್ರೀಯ ಹೆದ್ದಾರಿ ದೊಡ್ಡಬಳ್ಳಾಪುರ ನಗರದ ಹೊರ ವಲಯದ ಮೂಲಕ ಹಾದು ಹೋಗಿದೆ. ಈ ವೇಳೆ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಹೊರವರ್ತುಲ ಹೆದ್ದಾರಿ ನಿರ್ಮಾಣ ಮಾಡಲಾಗಿದೆ.
ಹೊರವರ್ತುಲ ರಸ್ತೆ ಯೋಜನೆ ಪ್ರಾರಂಭವಾಗಿದ್ದ ವೇಳೆ ವಿವೇಕಾನಂದ ನಗರದ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡುವ ಪ್ಲಾನ್ ಇತ್ತು. ಆದರೆ, ಈ ಸ್ಥಳದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕೆಲವರು ಅಂಡರ್ ಪಾಸ್ ನಿರ್ಮಾಣ ಆಗದಂತೆ ಸ್ಟೇ ತಂದಿದ್ದಾರೆ. ಅಂಡರ್ ಪಾಸ್ ನಿರ್ಮಾಣ ಆಗದೇ ಹೆದ್ದಾರಿ ಪ್ರಾರಂಭವಾಗಿದೆ. ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 40 ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿದೆ. ಇದರಿಂದ ಸಮಸ್ಯೆ ಅನುಭವಿಸುತ್ತಿರುವ 40 ಗ್ರಾಮಗಳ ಜನರು, ಅಂಡರ್ ಪಾಸ್ ನಿರ್ಮಾಣ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.